ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸು : ದೊಡ್ಡಗೌಡರ್ ಗೆ ಬೆಂಬಲ ಸೂಚಿಸಿದ ಮುಖಂಡರು - Kittur
ದೊಡ್ಡಗೌಡರ್ ಗೆ  ಬೆಂಬಲ ಸೂಚಿಸಿದ ಮುಖಂಡರು

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದ ಬಿಜೆಪಿ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದು, ಶಾಸಕ ಮಹಾಂತೇಶ ದೊಡ್ಡಗೌಡರ ಅವರಿಗೆ ಬೇಷರತ್ ಬೆಂಬಲ ಸೂಚಿಸಿದ್ದಾರೆ.

ಎಂ. ಕೆ. ಹುಬ್ಬಳ್ಳಿಯ ಡಾ. ಜಗದೀಶ ಹಾರುಗೊಪ್ಪ ಹಾಗೂ ಹಣ್ಣಿಕೇರಿಯ ಸಿದ್ದಯ್ಯ ಹಿರೇಮಠ ತಮ್ಮ ನಾಮಪತ್ರ ಪಡೆದು ಬೆಂಬಲ ಸೂಚಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಿದರು.

ಇಬ್ಬರೂ ಪಕ್ಷದ ಹಳೆಯ ಕಾರ್ಯಕರ್ತರಾಗಿದ್ದಾರೆ. ಪಕ್ಷ ಅವರಿಬ್ಬರ ಬಗ್ಗೆ ಗೌರವ ಇಟ್ಟುಕೊಂಡಿದೆ. ಆಂತರಿಕ ಅಸಮಾಧಾನದಿಂದಾಗಿ ನಾಮಪತ್ರ ಸಲ್ಲಿಸಿದ್ದರು. ಈಗ ಅವರ ಆತಂಕವನ್ನು ಪಕ್ಷದ ನಾಯಕರು ನಿವಾರಣೆ ಮಾಡಿದ್ದಾರೆ ಎಂದರು. 

ಜಿಲ್ಲೆಯ ಎಂಟು ಕಡೆಗೆ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಬಹುತೇಕ ಕಡೆಗಳಲ್ಲಿ ಸಂಧಾನ ಯಶಸ್ವಿಯಾಗಿ ಮಾಡಲಾಗಿದೆ. ಹೀಗಾಗಿ ಬಂಡಾಯದ ಮಾತಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಾಮಪತ್ರ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಮುಗಿದ ನಂತರ ಏ. 25 ರಿಂದ 26 ರವರೆಗೆ ಮತದಾರರ ಮಹಾಸಂಪರ್ಕ ಅಭಿಯಾನವನ್ನು ಪಕ್ಷ ಹಮ್ಮಿಕೊಂಡಿದೆ. ಇದರಡಿ ಮತದಾರರ ಪ್ರತಿ ಮನೆ, ಮನೆಗೆ ಭೇಟಿ ನೀಡಿ ಮತಯಾಚಿಸಲಾಗುವುದು. ಈ ಅಭಿಯಾನದಲ್ಲಿ ಕೇಂದ್ರದ ಮಂತ್ರಿಗಳು ಸೇರಿ 98 ಹಾಗೂ ರಾಜ್ಯ ಮಂತ್ರಿಗಳು ಸೇರಿ 140ಕ್ಕೂ ಹೆಚ್ಚು ನಾಯಕರು ಭಾಗವಹಿಸುವರು ಎಂದು ಮಾಹಿತಿ ನೀಡಿದರು. 

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ,   ಹಿರಿಯರ ಸಂಧಾನದಿಂದ ಇಬ್ಬರು ನಾಮಪತ್ರ ವಾಪಸು ಪಡೆದಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತಿದ್ದೇವೆ ಎಂದು ಹೇಳಿದರು.

ಡಾ. ಜಗದೀಶ ಹಾರುಗೊಪ್ಪ, ಸಿದ್ದಯ್ಯ ಹಿರೇಮಠ ಮಾತನಾಡಿ, ಅನೇಕ ನಾಯಕರು ಕರೆ ಮಾಡಿ ನನಗೆ ಸಲಹೆಗಳನ್ನು ನೀಡಿದರು. ಹೀಗಾಗಿ ಯಾವುದೇ ಕರಾರು ಇಲ್ಲದೆ ನಾಮಪತ್ರ ಹಿಂದಕ್ಕೆ ಪಡೆಯಲಾಗಿದೆ. ನಾಳೆಯಿಂದ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿದ್ದೇವೆ   ಎಂದು ಘೋಷಿಸಿದರು.

ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಮುಖಂಡ ಹನುಮಂತ ಕೊಟಬಾಗಿ, ಗುರುಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.


ಕಿತ್ತೂರು ವಿಧಾನಸಭೆ ಕ್ಷೇತ್ರದ ಎಂ. ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ಏ. 25 ರಂದು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ರೋಡ್ ಶೋ ನಡೆಸಲಿದ್ದಾರೆ

ಮಹಾಂತೇಶ ದೊಡ್ಡಗೌಡರ, ಶಾಸಕರು 

0/Post a Comment/Comments