ಬಿಜೆಪಿ ವಿರುದ್ಧ ಬೇಕಾಗಿದೆ ರಾಣಿ ಚನ್ನಮ್ಮನ ರೀತಿ ಹೋರಾಟ : ವೀಕ್ಷಕ ರವಿ ಮಲ್ಲು ಹೇಳಿಕೆ - Kittur


 

ಬಿಜೆಪಿ ವಿರುದ್ಧ ಬೇಕಾಗಿದೆ ರಾಣಿ ಚನ್ನಮ್ಮನ ರೀತಿ ಹೋರಾಟ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಪ್ರಜೆಗಳಿಂದ ಆಯ್ಕೆಯಾಗಿರುವ ಬಿಜೆಪಿ ಸರ್ಕಾರ ತಾಳಿರುವ ಪ್ರಜಾಪ್ರಭುತ್ವ ವಿರೋಧಿ ಧೋರಣೆ ವಿರುದ್ಧ ರಾಣಿ ಚನ್ನಮ್ಮನ ರೀತಿ ಎಲ್ಲರೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತೆಲಂಗಾಣದ ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನಸಭೆ ಕ್ಷೇತ್ರದ ಪಕ್ಷದ ವೀಕ್ಷಕ  ರವಿ ಮಲ್ಲು ಅಭಿಪ್ರಾಯಪಟ್ಟರು.

ಸ್ಥಳೀಯ ಚನ್ನಮ್ಮ ವರ್ತುಲದ ಬಳಿ ಇರುವ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕರೆಯಲಾಗಿದ್ದ  ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಧರ್ಮ-ಧರ್ಮ, ಜಾತಿ-ಜಾತಿ ಮಧ್ಯ ಬಿಜೆಪಿ ಅಸಹಿಷ್ಣುತೆ ಬಿತ್ತುತ್ತಿದೆ ಎಂದು ಆರೋಪಿಸಿದರು.

ಹಿಂದುತ್ವ ಎಂದು ಹೇಳುತ್ತ ಬಿಜೆಪಿಯು ಹಿಂದೂ ತತ್ವಗಳನ್ನು ವಿರೋಧಿಸುತ್ತ ನಡೆದಿದೆ. ಜಾತಿ, ಜನರ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಿರುವ ಬಿಜೆಪಿಯು ಹಿಂದು ತತ್ವ, ಸಿದ್ಧಾಂತಗಳಿಗೆ ಗೌರವ ನೀಡುತ್ತಿಲ್ಲ ಎಂದು ಟೀಕಿಸಿದರು. 

ವಸುದೇವ ಕುಟುಂಬಕಂ, ವಿವಿಧತೆಯಲ್ಲಿ ಏಕತೆ ಮತ್ತು ಓ ಶಾಂತಿ ಎಂಬ ಹಿಂದುತ್ವ ಮೂಲ ಆಶಯದೊಂದಿಗೆ ಎಲ್ಲರೂ ಬಾಳಬೇಕೆಂದು ತಿಳಿಸುತ್ತದೆ. ಬಿಜೆಪಿ ಈ ಎಲ್ಲ ವಿಚಾರಧಾರೆಗಳನ್ನು ವಿರೋಧಿಸುತ್ತದೆ.  ಕಾಂಗ್ರೆಸ್ ನಿಜವಾಗಿಯೂ ಹಿಂದುತ್ವದ ಈ ಆಶಯಗಳೊಂದಿಗಿದೆ ಎಂದರು.

ದೇಶದ ಸಾಮಾನ್ಯ ಜನರ ಜೀವನ ಮಟ್ಟ ಸುಧಾರಣೆ ಬಿಜೆಪಿಗೆ ಬೇಕಾಗಿಲ್ಲ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಒಡಕನ್ನುಂಟು ಮಾಡುತ್ತಿದೆ. ಕೇವಲ ಕಾರ್ಪೊರೇಟ್ ಸಂಸ್ಥೆಯ ಶ್ರೀಮಂತರನ್ನು ಉದ್ಧಾರ ಮಾಡುವ ಕಡೆಗೆ ಸಾಗಿದೆ ಎಂದು ದೂರಿದರು. 

ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಕಾಂಗ್ರೆಸ್ ಪಕ್ಷದ ಕಡೆಗೆ ಹೆಚ್ಚು ಒಲವು ಹೊಂದಿದ್ದಾರೆ. ಕಾಂಗ್ರೆಸ್  ಅಭ್ಯರ್ಥಿ ಬಾಬಾಸಾಹೇಬ ಪಾಟೀಲ ಬಗ್ಗೆ ಪ್ರೀತಿ ತೋರುತ್ತಿದ್ದಾರೆ. ಅವರನ್ನು ಹೆಚ್ಚು ಮತಗಳ ಅಂತರದ ಮೇಲೆ ಗೆಲ್ಲಿಸಲಿದ್ದಾರೆ ಎಂದು ಹೇಳಿದರು. 

ಎಐಸಿಸಿ ಯುವಮೋರ್ಚಾ ಮುಖಂಡ ದೇವೇಂದ್ರ ಬಿಸಾ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ, ಕುಟುಂಬದ ಯಜಮಾನಿಗೆ ರೂ. 2 ಸಾವಿರ ಹಾಗೂ ನಿರುದ್ಯೋಗ ಯುವಕರಿಗೆ ಮಾಸಾಶÀನ ನೀಡುವ ಗ್ಯಾರಂಟಿಯನ್ನು ಜಾರಿಗೆ  ತರುವುದರಲ್ಲಿ ಹಿಂದೇಟು ಹಾಕುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನೀಡಿದ್ದ ಭರವಸೆಯನ್ನು ಈಗಾಗಲೇ ಜಾರಿಗೆ ತಂದು ಅಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಮುಖಂಡರಾದ ಕಿರಣ ವಾಳದ, ವಿಜಯ ವಳಸಂಗ ಉಪಸ್ಥಿತರಿದ್ದರು.

0/Post a Comment/Comments