ಬಾಬಾಸಾಹೇಬ ಬಲ ಪ್ರದರ್ಶನ: ರಾರಾಜಿಸಿದ ಕಾಂಗ್ರೆಸ್ ಧ್ವಜ - Kitturಬಾಬಾಸಾಹೇಬ ಬಲ ಪ್ರದರ್ಶನ: ರಾರಾಜಿಸಿದ ಕಾಂಗ್ರೆಸ್ ಧ್ವಜ 

 ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕಿತ್ತೂರು ಪಟ್ಟಣ ಬುಧವಾರ ಕಾಂಗ್ರೆಸ್ ಧ್ವಜಮಯವಾಗಿತ್ತು. ಎಲ್ಲೆಡೆಯೂ ಕಾಂಗ್ರೆಸ್ ಪಕ್ಷದ ಚಿಹ್ನೆಇರುವ ಧ್ವಜ  ಹಿಡಿದು  ಮುಗಿಲೆತ್ತರಕ್ಕೆ ಜಯಘೋಷದ ಕಹಳೆ ಮೊಳಗಿಸಿದರು. ಡೊಳ್ಳು ವಾದನ, ಜಾಂಝ್ ಬಡಿತ ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ ಅವರ ರೋಡ್ ಶೋ ಹೆಚ್ಚು ಕಳೆಗಟ್ಟುವಂತೆ ಮಾಡಿದವು.

ಸೋಮವಾರ ಪೇಟೆಯ ರಾಣಿ ಚನ್ನಮ್ಮ ಪ್ರತಿಮೆಯಿಂದ ರಾಷ್ಟ್ರೀಯ ಹೆದ್ದಾರಿ ಸಮೀಪದ ಚನ್ನಮ್ಮ ಪ್ರತಿಮೆವರೆಗೂ ಈ ಭರ್ಜರಿ ರೋಡ್ ಶೋ ನಡೆಯಿತು. ಬಾಬಾಸಾಹೇಬರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹಿಂಡುಗಟ್ಟಿಕೊಂಡು ಬಂದು  ರೋಡ್  ಶೋಗೆ ಜಮೆಯಾಗುತ್ತಿದ್ದರು. ಪಟ್ಟಣದ ತುಂಬೆಲ್ಲ ಬುಧವಾರ (ಏ. 19) ಕಾಂಗ್ರೆಸ್ ಧ್ವಜಗಳು ಹಾರಾಡಿದವು.

ರೋಡ್ ಶೋ ಮುಗಿದ ಬಳಿಕ ಐವರು ಬೆಂಬಲಿಗರೊಂದಿಗೆ ತಾಲೂಕು ಆಡಳಿತ ಭವನಕ್ಕೆ ತೆರಳಿ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಬಳಿ ನಾಮಪತ್ರ ಸಲ್ಲಿಸಿದರು.

ಶಂಕರ ಹೊಳಿ, ಹಬೀಬ ಶಿಲೇದಾರ, ರಾಜಾಸಲೀಂ ಕಾಶೀಮನವರ, ಹನೀಫ್ ಸುತಗಟ್ಟಿ, ಬಿಷ್ಟಪ್ಪ ಶಿಂಧೆ, ರೋಹಿಣಿ ಬಾಬಾಸಾಹೇಬ ಪಾಟೀಲ, ಸಂಗನಗೌಡ ಪಾಟೀಲ, ನಿಂಗಪ್ಪ ಅರಕೇರಿ, ಮುದಕಪ್ಪ ಮರಡಿ, ಎಂ. ಎಫ್. ಜಕಾತಿ, ಚಂದ್ರಗೌಡ ಪಾಟೀಲ, ಪರವೀಜ್ ಹವಾಲ್ದಾರ, ಪುಂಡಲೀಕ ನೀರಲಕಟ್ಟಿ, ರಮೇಶ ಮೊಕಾಶಿ, ಆಶ್ಫಾಕ್ ಹವಾಲ್ದಾರ, ಕೃಷ್ಣ ಬಾಳೇಕುಂದರಗಿ, ಅನಿಲ ಎಮ್ಮಿ ಭಾಗವಹಿಸಿದ್ದರು.

ಲಕ್ಷ್ಮಣ ಸವದಿ ಪ್ರಚಾರ

ನಾಮಪತ್ರ ಸಲ್ಲಿಸಿದ ಬಾಬಾಸಾಹೇಬ  ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಲು ಲಕ್ಷ್ಮಣ ಸವದಿ ಅವರನ್ನು ಕರೆಸಲಾಗುವುದು. ಇನ್ನೂ ಕೆಲವು ನಾಯಕರು ಆಗಮಿಸಿ ನನ್ನ ಪರವಾಗಿ ಪ್ರಚಾರ ಮಾಡುವರು ಎಂದರು.

ಕಾಂಗ್ರೆಸ್‍ನಲ್ಲಿ ಭಿನ್ನಮತವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮುಖಂಡರಾದ ಶಂಕರ ಹೊಳಿ ಮತ್ತು ಹಬೀಬ ಶಿಲೇದಾರ ಅವರೂ ಪ್ರಚಾರ ಮಾಡುವರು. ಈ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಮತ್ತೆ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಕ್ಷ್ಮಿ ಹೆಬ್ಬಾಳಕರ ಆಗಮನ

ರಾಷ್ಟ್ರೀಯ ಹೆದ್ದಾರಿ ಸಮೀಪದ ಅಶ್ವಾರೂಢ ಚನ್ನಮ್ಮ ಪ್ರತಿಮೆ ಬಳಿ ರೋಡ್ ಶೋ ಬಂದಾಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆಗಮಿಸಿದರು. ಅವರು ಮಾತನಾಡಿ, ಕನಸಿನಲ್ಲೂ ಬಿಜೆಪಿ ಬಿಡುವುದಿಲ್ಲ ಎನ್ನುತ್ತಿದ್ದ ಜಿಲ್ಲೆಯ ನಾಯಕ ಲಕ್ಷ್ಮಣ ಸವದಿ ಅಂಥವರೂ ತಮ್ಮ ಸ್ವಾಭಿಮಾನಕ್ಕಾಗಿ ಬಿಜೆಪಿ ಬಿಟ್ಟರು. ಭ್ರಮನಿರಶನಗೊಂಡ ಜಗದೀಶ ಶೆಟ್ಟರ ಅವರೂ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲ ಎಂದು ಅಪಾದಿಸಿದರು.

0/Post a Comment/Comments