ಕಾಂಗ್ರೆಸ್ ನಿಟ್ಟುಸಿರು; ಬಿಜೆಪಿಗೆ ಎದುಸಿರು - Kittur


 ಕಾಂಗ್ರೆಸ್ ನಿಟ್ಟುಸಿರು; ಬಿಜೆಪಿಗೆ ಎದುಸಿರು

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದ್ದ ಕಾಂಗ್ರೆಸ್ ಪಕ್ಷವು ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಹತ್ತಿರ ಬರುತ್ತಿದ್ದಂತೆಯೇ ಒಡೆದ ಬಣ ಒಂದಾಗುವತ್ತ ದಾಪುಗಾಲ  ಹಾಕಿದೆ.  ನಾಯಕರ ನಡವಳಿಕೆಯಿಂದ ಬೇಸತ್ತು ದಾರಿ ಅಗಲುವ ಮನಸ್ಸು ಮಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಹಬೀಬ ಶಿಲೇದಾರ ಮಂಗಳವಾರ ಮುನಿಸು ಮರೆತು ಒಂದಾಗಿದ್ದಾರೆ. ಇದು ವಿರೋಧಿ ಬಿಜೆಪಿ ಪಾಳಯದ ಸ್ವಲ್ಪವಾದರೂ ನಿದ್ದೆಗೆಡಿಸುವ ರಾಜಕೀಯ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಿ. ಬಿ. ಇನಾಮದಾರ ಅವರ ಅನಾರೋಗ್ಯದಿಂದಾಗಿ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಯಿತು. ಕಳೆದ ಬಾರಿ ಇನಾಮದಾರ ಅವರ ಸೋಲಿಗೆ ಕಾರಣರಾದರು ಎಂದು ಭಾವಿಸಿ ನಿರಂತರ ಅಂತರ ಕಾಯ್ದುಕೊಂಡೇ ಬಂದಿದ್ದ ಈ ಪರಿವಾರ ಕಾಂಗ್ರೆಸ್ ಟಿಕೆಟ್‍ಗಾಗಿ ತೀವ್ರ ಪ್ರಯತ್ನ ನಡೆಸಿತ್ತು. ಟಿಕೆಟ್ ಸಿಗದ ಕಾರಣದಿಂದಾಗಿ ಪಕ್ಷೇತರರಾಗಿ ಇನಾಮದಾರ    ಮನೆತನದಿಂದ ಯಾರಾದರೊಬ್ಬರು ಸ್ಪರ್ಧಿಸುತ್ತಾರೆ ಎಂದು ಅವರ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಸ್ಪರ್ಧಿಸುವ ಬಗ್ಗೆ ಅಭಿಮಾನಿಗಳ ಸಲಹೆಯನ್ನು ಕೆಲವು ಸಭೆ ಮಾಡಿ ಪಡೆದುಕೊಳ್ಳಲಾಗಿತ್ತು. ಕೊನೆಗೂ ಅವರು ಕೈಚೆಲ್ಲಿದರು. ಮನೆಯ ಹಿರಿಯರು ಅಜಾರಿಯಾಗಿ ಹಾಸಿಗೆ ಮೇಲೆ ಇರುವಾಗ ಸ್ಪರ್ಧೆ ಬೇಡ ಎಂಬ ಗಟ್ಟಿ ನಿರ್ಧಾರವನ್ನು ತಳೆದರು. ಈ ಬಗ್ಗೆ ಅನೇಕ ಅವರ ಅಭಿಮಾನಿಗಳಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಕಾಂಗ್ರೆಸ್ ಬಂಡಾಯವಾಗಿ ಮತ್ತೊಬ್ಬ ನಾಯಕರು, ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಹಬೀಬ ಶಿಲೇದಾರ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆಂಬ ಮಾತುಗಳೂ ತೇಲಾಡಿದವು. ಶಿಲೇದಾರ ಅವರ ಮನವೊಲಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಾಬಾಸಾಹೇಬ ಪಾಟೀಲ ಜೊತೆ ಈಗ ಒಂದು ಮಾಡಲಾಗಿದೆ. ಇದನ್ನೆಲ್ಲ ನೋಡಿದರೆ, 2018ರ ಚುನಾವಣೆಯಲ್ಲಿ ಆದ ಬಂಡಾಯದ ಲಾಭ ಪಡೆಯಲು ತುದಿಗಾಲ ಮೇಲೆ ನಿಂತಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಈಗ ಏನಿದ್ದರೂ ನೇರಾ,ನೇರಾ ಯುದ್ಧ ಎನ್ನುವಂತಾಗಿದೆ.

ಹಾಗೆ ನೋಡಿದರೆ ಬಿಜೆಪಿಯಲ್ಲಿಯೇ ಈಗ ಬಂಡಾಯ ತೀವ್ರ ಸ್ವರೂಪ ಪಡೆಯುತ್ತಿದೆ. ಕಮಲದ ಜೊತೆ ಗುರುತಿಸಿಕೊಂಡಿದ್ದ ಎಂ. ಕೆ. ಹುಬ್ಬಳ್ಳಿಯ ದಂತವೈದ್ಯ ಜಗದೀಶ ಹಾರುಗೊಪ್ಪ ಅವರು ಬಿಜೆಪಿ ಹಿರಿಯರ ನಡವಳಿಕೆಯಿಂದ ಬೇಸತ್ತು ಬಂಡಾಯ ಬಾವುಟ ಹಾರಿಸಿಯಾಗಿದೆ. ಹಣ್ಣಿಕೇರಿ ಕಟ್ಟಾ ಬಿಜೆಪಿ ಕಾರ್ಯಕರ್ತ, ಸಂಸದ ಅನಂತಕುಮಾರ ಹೆಗಡೆ ಅವರಿಗೆ ಆಪ್ತರಾಗಿರುವ ಸಿದ್ದಯ್ಯ ಹಿರೇಮಠ ಕೂಡಾ ಸ್ಪರ್ಧೆಗೆ ಇಳಿಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. 

ಯಾವ ಪಕ್ಷದಲ್ಲಿ ಬಂಡಾಯ ಆಗುವುದಿಲ್ಲವೋ ಎಂದು ನಿರೀಕ್ಷಿಸಿದ್ದರೂ ಅಲ್ಲೇ ಈಗ ಇಬ್ಬರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಿತ್ತೂರು ಕ್ಷೇತ್ರ ಹೆಚ್ಚು ಕುತೂಹಲದ ಕಣವಾಗಿ ಮಾರ್ಪಟ್ಟಿದೆ. 

ನೊಂದವರೆಲ್ಲ ಕಾಂಗ್ರೆಸ್‍ನಲ್ಲಿ ಒಂದಾಗಿದ್ದರೆ, ಒಂದಾಗಿದ್ದ ಬಿಜೆಪಿಯಲ್ಲಿ, ಅದೂ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ತವರು ನೆಲ ನೇಸರಗಿ ವೃತ್ತದ ಊರಿನಲ್ಲಿಯೇ ಬಂಡಾಯದ ಗಾಳಿ ಬೀಸಿದೆ. ಮಲಪ್ರಭಾ ನದಿಯಾಚೆ ಬೀಸಿರುವ ಈ ಬಂಡಾಯದ ಗಾಳಿ ಬಿಜೆಪಿಗೆ ಏದುಸಿರು ಬಿಡುವಂತೆ ಮಾಡಿದೆ. ಒಂದಾದ ಕಾಂಗ್ರೆಸ್ ಈಗ ನಿಟ್ಟುಸಿರು ಬಿಡುವಂತಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.

0/Post a Comment/Comments