ಕೂಲಿ ಇನ್ನೂರು: ಗಳಿಕೆ ಮಾತ್ರ ನೂರು - ಎಂ. ಎಫ್. ಜಕಾತಿ - Kittur


 

ಸಮಸ್ಯೆ ಸುಳಿಯಲ್ಲಿ ರೈತ; ಪರಿಹಾರ ಒದಗಿಸುವವರಾರು..? ವಿಡಿಯೋ ನೋಡಿ...


ಕೂಲಿ ಇನ್ನೂ.ರು: ಗಳಿಕೆ ಮಾತ್ರ ನೂರು

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಒಬ್ಬ ಕೂಲಿಯವರು ಒಂದೂವರೆ ಮಣ ಕೊಯ್ಯುತ್ತಾರೆ. ಅವರ ಕೂಲಿಗೆ ಇನ್ನೂರು ರೂಪಾಯಿ ಖರ್ಚಾಗುತ್ತದೆ, ಇದನ್ನು ಕಳೆದರೆ ರೈತನಿಗೆ ಮಣವೊಂದಕ್ಕೆ ನೂರು ರೂಪಾಯಿ ಕೈಗೆ ಸೇರುತ್ತದೆ. ಗೊಬ್ಬರ, ಬೀಜ ಮತ್ತು ದುಡಿದ ಖರ್ಚು ಇದರಲ್ಲಿ ಹೇಗೆ ಗಿಟ್ಟಬೇಕು..

ಮೆಣಸಿನಕಾಯಿ ಬೆಳೆಗಾರನ ಈ ನೋವನ್ನು  ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಎಳೆ, ಎಳೆಯಾಗಿ ಬಿಚ್ಚಿಟ್ಟವರು ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಎಂ. ಎಫ್. ಜಕಾತಿ.

ಬೆಳೆದ ಬೆಳೆಗೆ ಸಮರ್ಪಕ ಬೆಲೆ ರೈತನಿಗೆ ಸಿಗುತ್ತಿಲ್ಲ.  ರೈತನ  ಸಂಕಷ್ಟ ಹೇಳತೀರದಾಗಿದೆ. ಹಾಕಿದ ದುಡ್ಡು ಕೈಗೆ ಬರದೆ ಹೋದರೆ ಜೀವನ ಹೇಗೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.

ಈಗ ಬೇಸಿಗೆ ಕಾಲ ಪ್ರಾರಂಭವಾಗಿದೆ. ರೈತನ ಹೊಲದಲ್ಲಿರುವ ಟಿಸಿ ಸುಟ್ಟು ಹೋಗುತ್ತಿದೆ. ಸುಟ್ಟ ಟಿಸಿ ರಿಪೇರಿಯಾಗಿ ಬಂದು ಹೊಲದಲ್ಲಿ ಕೂಡ್ರಿಸಬೇಕೆಂದರೆ ಕನಿಷ್ಠ ಆರು ದಿನಗಳು ಬೇಕಾಗುತ್ತಿದೆ. ರಿಪೇರಿಯಾದ ಟಿಸಿಯೂ ಎರಡ್ಮೂರು ದಿನದಲ್ಲಿ ಸುಟ್ಟ ಹೋಗುತ್ತಿದೆ. ಹೀಗಾದರೆ ಬೆಳೆಗಳಿಗೆ  ರೈತ  ನೀರು ಉಣ್ಣಿಸುವುದಾದರೂ ಹೇಗೆ ಮಾಡಬೇಕು ಎಂದು ಕೇಳಿದರು.

ಹೊಲದಲ್ಲಿ ದನ,ಕರುಗಳಿರುತ್ತವೆ. ಮೊಣಕಾಲುದ್ದ ಬೆಳೆದ ಬೆಳೆ ಇರುತ್ತದೆ. ಟಿಸಿ ಸುಟ್ಟಿದ್ದರಿಂದ ನೀರು ಸಿಗದಂತಹ ದುಃಸ್ಥಿತಿ ನಿರ್ಮಾಣವಾಗಿರುತ್ತದೆ. ಯಾರ ಮುಂದೆ ರೈತ ಈ ಸ್ಥಿತಿಯನ್ನು ವಿವರಿಸಬೇಕು. ಯಾರೂ ಈ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ದೂರಿದರು.

ಹೊಲದಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳಿಂದಾಗಿ ಅನೇಕ ಬೆಂಕಿ ಅವಘಡಗಳು ಸಂಭವಿಸಿರುವುದನ್ನು ನೋಡಿದ್ದೇವೆ. ಈ ಪರಿಸ್ಥಿತಿ ಪೂರ್ಣ ಸುಧಾರಣೆ ಆಗಿಲ್ಲ. ಹೆಸ್ಕಾಂ ಈ ಬಗ್ಗೆ ಗಮನ ಹರಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು. 

ಹಗಲು ಹೊತ್ತಿನಲ್ಲಿ ಸರ್ಕಾರಿ ನೌಕರರು ಕೆಲಸ ಮಾಡುತ್ತಾರೆ. ಆದರೆ ರೈತರ ಪಂಪ್‍ಸೆಟ್‍ಗಳಿಗೆ ಹಗಲು ಮತ್ತು ರಾತ್ರಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಹಗಲು ಹೊತ್ತಿನಲ್ಲಿ ಮಾತ್ರ ವಿದ್ಯುತ್ ಪೂರೈಸಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕಣ್ಣಿಗೆ ಕಾಣಿಸುವಂತೆ ಲಂಚ ತೆಗೆದುಕೊಳ್ಳುವುದಿಲ್ಲ   ಎಂಬ ನಾಮಫಲಕವನ್ನು ಪ್ರದರ್ಶಿಸಬೇಕು. ಟೇಬಲ್ ಮುಂದೆಯೂ ‘ಈ ಕೆಲಸಕ್ಕೆ ಇಲ್ಲಿ ಸಂಪರ್ಕಿಸಬೇಕು’ ಎಂಬ ನಾಮಫಲಕ ಹಾಕಬೇಕು ಎಂದರು.

ಮುಖಂಡರಾದ ಅಪ್ಪೇಶ ದಳವಾಯಿ, ಜಿ. ಎಸ್. ಹಿರೇಮಠ, ಎಂ. ಆರ್. ಹೊಂಗಲ ಉಪಸ್ಥಿತರಿದ್ದರು.


ಸರ್ಕಾರಿ  ಕಚೇರಿಯಲ್ಲಿ ಅಧಿಕಾರಿಗಳು ರಾಜರಂತೆ ಮೆರೆದು, ರಾಕ್ಷಸರಂತೆ ಜನರ ಜೊತೆ ವರ್ತಿಸುತ್ತಿದ್ದಾರೆ

 ಅಪ್ಪೇಶ ದಳವಾಯಿ, ರೈತ ಮುಖಂಡ

0/Post a Comment/Comments