ವಿದ್ಯಾರ್ಥಿಗಳ ಕುಂಚದಲ್ಲಿ
ಅರಳಿದ ಕೋಟೆ,ಕೊತ್ತಲು
ಚನ್ನಮ್ಮನ ಕಿತ್ತೂರು: ಕೈಯಲ್ಲಿ ಹಿಡಿದಿದ್ದ ಕುಂಚ, ಪಕ್ಕದಲ್ಲಿಟ್ಟುಕೊಂಡಿದ್ದ ಬಣ್ಣದ ಬಟ್ಟಲು ಐತಿಹಾಸಿಕ ತಾಣಗಳ ಕುರಿತು ಬಿಡಿಸಿದ್ದ ರೇಖಾ ಚಿತ್ರಗಳಿಗೆ ಬಣ್ಣ ತುಂಬಿದವು. ತಾವು ನೋಡಿದ ಅಂತರಾಳದಲ್ಲಿ ಇಳಿದಿದ್ದ ಸ್ಮಾರಕಗಳನ್ನು ಕ್ಯಾನವಾಸ್ ದಲ್ಲಿ ಮೂಡಿಸಿ ಸಂಭ್ರಮಿಸಿದರು.
ವಿಶ್ವ ಪಾರಂಪರಿಕ ದಿನದ ಅಂಗವಾಗಿ ಇಲ್ಲಿಯ ಕೋಟೆ ಆವರಣದೊಳಗಿರುವ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ, ಕಸಾಪ ತಾಲೂಕು ಘಟಕವು ಜಂಟಿಯಾಗಿ ಏರ್ಪಡಿಸಿದ್ದ ಚಿತ್ರ ಕಲಾ ಸ್ಪರ್ಧೆಯು ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆಯಾಗಿತ್ತು.
ಇತಿಹಾಸ ಪ್ರಸಿದ್ಧ ದಿಲ್ಲಿಯ ಕೆಂಪುಕೋಟೆ, ಆಗ್ರಾದಲ್ಲಿರುವ ತಾಜಮಹಲ್, ಹಂಪಿ ಕಲ್ಲಿನ ರಥ, ಕಿತ್ತೂರು ಕೋಟೆ, ದೆಹಲಿಯಲ್ಲಿಯ ಕುತುಬ್ ಮಿನಾರ್, ವಿಜಯಪುರದ ಗೋಳಗೊಮ್ಮಟ, ಕಲ್ಲಿನ ಬಾವಿ ಚಿತ್ರ ಬಿಡಿಸಿದ ವಿದ್ಯಾರ್ಥಿಗಳು ಅವುಗಳಿಗೆ ಜೀವ ತುಂಬಿದರು.
ಪಾರಂಪರಿಕ ದಿನದ ಅಂಗವಾಗಿ ಸ್ಮಾರಕಗಳು, ಪರಂಪರೆ ತಾಣಗಳ ಛಾಯಾಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
1983ರಿಂದ ಐಕಾಂದವರು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೊಸ್ಕೊ ದವರು ಪ್ರತಿವರ್ಷ ಏ. 18ರಿಂದ ವಿಶ್ವ ಪಾರಂಪರಿಕ ದಿನವಾಗಿ ಆಚರಣೆ ಮಾಡುತ್ತ ಬರಲಾಗಿದೆ ಎಂದು ಪ್ರಾಚ್ಯವಸ್ತು ಇಲಾಖೆ ಕ್ಯೂರೇಟರ್ ರಾಘವೇಂದ್ರ ತಿಳಿಸಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕ ಬಹುಮಾನ ನೀಡಲಾಗುತ್ತಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ. ಎಸ್. ಬಿ. ದಳವಾಯಿ ಹೇಳಿದರು.
ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Post a Comment