ಸರಳ, ಸಾತ್ವಿಕ, ಸ್ಥಿತಪ್ರಜ್ಞ ಸಿದ್ದೇಶ್ವರ ಶ್ರೀ - Vijayapur


 ಸರಳ, ಸಾತ್ವಿಕ, ಸ್ಥಿತಪ್ರಜ್ಞ ಸಿದ್ದೇಶ್ವರ ಶ್ರೀ

ಸಮಯ ಪ್ರಜ್ಞೆಗೆ ಗಡಿಯಾರದ ಮುಳ್ಳು ಸೋತಿದ್ದಿದೆ!

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಜೇಬುಗಳಿಲ್ಲದ ಶುಭ್ರ ಖಾದಿಬಟ್ಟೆ, ಲುಂಗಿ, ಕೊರಳಿಗೆ ಸುತ್ತಿಕೊಂಡ ವಸ್ತ್ರ, ದೊಡ್ಡ ಗ್ಲಾಸಿನ ಕನ್ನಡಕ, ಬಡಕಲು ದೇಹ, ಆದರೆ ಒಳಗಿರುವ ಶಕ್ತಿ ಮಾತ್ರ ಅದ್ಭುತ, ಮಾತು ಜಾರಿದರೆ ಬಿದ್ದು ಒಡೆದೀತು ಎಂಬಷ್ಟು ಸೂಕ್ಷ್ಮ. ಅದರ ಪ್ರಭಾವ ಮಾತ್ರ ಗೌರಿಶಂಕರ.   ತಲೆ ಬಾಗಿ ನಮಸ್ಕರಿಸಬೇಕೆನ್ನುವ ವ್ಯಕ್ತಿತ್ವ...

ಲೌಕಿಕ ವಿಷಯದಲ್ಲಂತೂ ದಿವ್ಯ ನಿರ್ಮೋಹಿ, ಪ್ರಶಸ್ತಿ, ಪುರಸ್ಕಾರ, ಕೊಡುಗೆಗಳಿಂದ ಸದಾ ಮೈಲುದ್ದ ದೂರ.  

ಸ್ಥಿತಪ್ರಜ್ಞ,  ಪರಿಸರ  ಬಗೆಗಿನ ಕಾಳಜಿಯಂತೂ ಅಪಾರ. ಅವರ ಬೋಧನೆಯ 'ಪ್ರವಚನ'ದಲ್ಲಿ ದೇಶ, ವಿದೇಶಗಳ ತತ್ತ್ವಜ್ಞಾನಿಗಳ ಉಲ್ಲೇಖ. ಅವರು ಮಾಡಿದ ಸಾಧನೆಗಳ ಅನಾವರಣ, ಮನೆಯ ಹಿರಿಯಜ್ಜ ಅಥವಾ ಹಿರಿಯಣ್ಣ ತಲೆ ನೇವರಿಸಿ ಹೀಗೆ ಬದುಕಬೇಕು ಎಂದು ಹುರಿದುಂಬಿಸುವ   ಮಾತುಗಳು  ಗಡಿಯಾರದ ಮುಳ್ಳನ್ನೇ  ಹೊಂದಿಸಿಟ್ಟುಕೊಳ್ಳುವ ಸಮಯಪ್ರಜ್ಞೆ. 

ದೇಶಕಂಡ ಅತ್ಯಂತ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳನ್ನು ಏನೆಂದು ವರ್ಣಿಸಬೇಕು..? ಅವರ ಕಾಲದಲ್ಲಿ ನಾವೂ ಇದ್ದೆವಲ್ಲ ಎಂಬುದೇ ಬದುಕಿನ ಬಹುದೊಡ್ಡ ಭಾಗ್ಯ!

ಲೌಕಿಕ ನಿರ್ಮೋಹಿ

ಸಂಶೋಧಕರು, ಉತ್ತಮ ಮಾತುಗಾರರು, ನಾಡು ಕಂಡಂಥ ಶ್ರೇಷ್ಠ ಸಾಧು, ಸಂತರನ್ನು ಒಂದು ವೇದಿಕೆಯಲ್ಲಿ ಸೇರಿಸಿ ಅವರ ಮಾತುಗಳನ್ನು ಸಾಮಾನ್ಯ ಭಕ್ತರಂತೆ, ಸಭಿಕರಂತೆ ಕೇಳುವ ಸಹನೆ ಅವರಲ್ಲಿರುವುದನ್ನು ಹತ್ತಿರದಿಂದ ಕಂಡು ಬೆರಗಾಗಿದ್ದಿದೆ. 

ಅವರು ದಾವಣಗೇರಿ ಭಕ್ತರಂತ ಕಾಣುತ್ತದೆ. ಸಿದ್ದೇಶ್ವರ ಶ್ರೀಗಳ ಬಳಿ ಬಂದರು. ‘ಅಪ್ಪಾರ, ಶ್ರೀಗಂಧದ ಕಟ್ಟಿಗೆಯಲ್ಲಿ ತಮಗೊಂದು ಜೋಡು ಆವಿಗೆ (ಕಟ್ಟಿಗೆ  ಪಾದರಕ್ಷೆ) ಮಾಡಿಸಿಕೊಂಡು ಬರುತ್ತೇನೆ' ಎಂದರು. ‘ನನಗ್ಯಾಕ್ ಬೇಕ್‍ಪಾ ಅವು..' ಎಂದು ತುಟಿಯಂಚಿನಲ್ಲಿ ಕಿರುನಗೆ ಬೀರಿದ್ದರು. 

ಸ್ವಾಮೀಜಿಯ ಸಾತ್ವಿಕ ಮನಸ್ಸು ಶ್ರೀಗಂಧದ ಆವಿಗೆ ಮಾತ್ರ ಬೇಡವೆನ್ನಲಿಲ್ಲ, ವಿಶ್ವವಿದ್ಯಾಲಯ ನೀಡಲು ಬಂದಿದ್ದು ಗೌರವ ಡಾಕ್ಟರ್ ಪದವಿಗೂ ಹೀಗೆ ಸ್ಪಂದಿಸಿತ್ತು. ಭಾರತ ಸರ್ಕಾರ ನೀಡಲು ಬಯಸಿದ್ದ ‘ಪದ್ಮಶ್ರೀ’ ಮೇರು ಪುರಸ್ಕಾರವನ್ನೂ ನಯವಾಗಿ ತಿರಸ್ಕರಿಸಿತ್ತು. ಭವದ  ಎಲ್ಲ ಬಂಧನಗಳನ್ನೂ   ಅವರು ಕಳಚಿಕೊಂಡಂತಿದ್ದರು. ಮನುಕುಲದ ಜ್ಞಾನ ವಿಸ್ತಾರ ಮತ್ತು ಬದುಕು ಶುದ್ಧಿ ಮಾಡಿಕೊಳ್ಳುವುದಕ್ಕಾಗಿ ಜುಳು, ಜುಳು ಹರಿಯುವ ನದಿಯಂತೆ ಉಪನ್ಯಾಸ ನೀಡಿದರು. ಅವೆಲ್ಲ ಬಹುದೊಡ್ಡ ಪ್ರಮಾಣದ ಭಕ್ತರಲ್ಲಿ ಗಾಢ ಪ್ರಭಾವ ಬೀರಿವೆ. ಸಾತ್ವಿಕ ದಾರಿಯ ಬೆಳಕಾಗಿ ಗೋಚರಿಸಿವೆ. ಸಂತ, ಸನ್ಯಾಸಿ ಕುಲಕ್ಕೆ ಬಹುದೊಡ್ಡ ಪರಂಪರೆಯನ್ನು ಈ ಯುಗಪುರುಷ ಬಿಟ್ಟು ಹೋಗಿದ್ದಾರೆ. ಮಾನವ ಕುಲದ ಮಧ್ಯೆ ಯುಗ, ಯುಗಗಳು ಸಾಗಿದರೂ ಅವರ ನೀತಿಯುತ ಬದುಕು ಬಿತ್ತರಿಸಿದ ಪ್ರವಚನಗಳ ರೀತಿ ಶಾಶ್ವತವಾಗಿರುತ್ತದೆ.

ಬುದ್ದ, ಬಸವರ ತತ್ವಗಳನ್ನು ಅಳವಡಿಸಿಕೊಂಡಿದ್ದ 21 ನೇ ಶತಮಾನದ ಸಂv.À ಜ್ಞಾನಕ್ಕೆ ಇನ್ನೊಂದು ಹೆಸರು ಸಿದ್ದೇಶ್ವರ ಶ್ರೀಗಳು. ಮುಂದಿನ ಶತಮಾನದಲ್ಲಿ ಇಂಥವರನ್ನು ಕಾಣಲು ಸಾಧ್ಯವಿಲ್ಲ. ದೇಹ ಹೋಗಿದೆ, ಅವರು ಕೊಟ್ಟಂತಹ ಮಾರ್ಗವಿದೆ. ಅದರಲ್ಲಿ ಸಾಗೋಣ

ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠ, ಚನ್ನಮ್ಮನ ಕಿತ್ತೂರು

****

ಬ್ಯಾಂಕ್ ಮೆ ಖಾತಾ ನಹಿ, ಪರಿವಾರ್ ಸೆ ನಾಥಾ ನಹಿ, ವಚನ್ ಮೆ ಜಗಡೆ ನಹಿ, ಅಮೀರಿ ಗರೀಬಿ ನಹಿ' ಎಂಬ ಸಂತವಾಣಿಯಂತೆ ಅಕ್ಷರಶಃ ಬದುಕಿದ ಸಿದ್ದೇಶ್ವರ ಶ್ರೀಗಳ ನಡೆ ಎಲ್ಲ ಕಾಲಕ್ಕೂ ಪ್ರಸ್ತುತ ಮತ್ತು ಮಾದರಿಯಾಗಿರುತ್ತದೆ. ಅವರ ದೇಹಾಂತ್ಯದಿಂದಾಗಿ ಸಾತ್ವಿಕ ಯುಗದ ಪರಂಪರೆಯ ಗಟ್ಟಿಕೊಂಡಿ ಕಳಚಿದೆ. ಸಿಹಿಮಾತು, ಅಕ್ಕರೆಯ ಕಡಲಾಗಿದ್ದ ಅವರ ಮಾತುಗಳು ಶತ, ಶತಮಾನಗಳ ವರೆಗೂ ಭಕ್ತರನ್ನು ಕೈ ಹಿಡಿದು ನಡೆಸುತ್ತಲೆ ಇರುತ್ತವೆ.

0/Post a Comment/Comments