ಕಾಂಗ್ರೆಸ್‍ಗೆ ರೈತಸಂಘದ ಅಖಂಡ ಬೆಂಬಲ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದಿವಂಗತ ಬಾಬಾಗೌಡ ಪಾಟೀಲ ಅವರು ಹುಟ್ಟು ಹಾಕಿದ್ದ ಅಖಂಡ ಕರ್ನಾಟಕ ರೈತಸಂಘ ಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂಬ ಸಂದೇಶವನ್ನು ಸಂಘಟನೆ ಪ್ರಮುಖರು ನೀಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ರೈತರ ಗೋಳು ಹೇಳತೀರದಾಗಿದೆ. ಬೆಳೆದ ಬೆಳೆಗೆ ಒಳ್ಳೆಯ ಧಾರಣಿ ಸಿಗುತ್ತಿಲ್ಲ. ಹಲವಾರು ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತ ಕುಲದ ಮೇಲೆ ಗದಾಪ್ರಹಾರ ಮಾಡಿದೆ ಎಂದು ಸಮೀಪದ ನಿಚ್ಚಣಕಿ ಗ್ರಾಮದ ಅಪ್ಪೇಶ್ ದಳವಾಯಿ ಅವರ ಮನೆ ಆವರಣದಲ್ಲಿ ಸೋಮವಾರ ಕರೆಯಲಾಗಿದ್ದ ಚಿಂತನಸಭೆಯಲ್ಲಿ ಮಾತನಾಡಿದ ಪ್ರಮುಖರು ಆರೋಪಿಸಿದರು.
ಚಿಂತನ ಸಭೆಯ ರೂವಾರಿ, ರೈತಪರ ಹೋರಾಟಗಾರ ಹಾಗೂ ಕಾಂಗ್ರೆಸ್ ಮುಖಂಡ ಪಿ. ಎಚ್. ನೀರಲಕೇರಿ ಮಾತನಾಡಿ, ನಿರಂತರವಾಗಿ ಬಿಜೆಪಿ ಸರ್ಕಾರ ರೈತರನ್ನು ಶೋಷಣೆ ಮಾಡುತ್ತಿದೆ. ಇದರಿಂದ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಅವರ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಘೋಷಿಸಿದರು.
ಅಮೇರಿಕದ ವೈಟ್ ಹೌಸ್‍ಗೆ ಹೋಗಿ ಕೋವಿಡ್ ನಲ್ಲಿ ಸತ್ತವರ ಬಗ್ಗೆ ಕಣ್ಣೀರು ಸುರಿಸುವ ಪ್ರಧಾನಿ ಮೋದಿ, ತಮ್ಮ ಮಗ್ಗುಲಲ್ಲಿ ನೂರಾರು ರೈತರು ಸತ್ತರೆ ಹನಿ ಕಣ್ಣೀರು ಸುರಿಸಲಿಲ್ಲ. ದೇಶದ ರೈತರ ವಿಷಯದಲ್ಲಿ ಅವರದು ಕಲ್ಲು ಹೃದಯ. ಇಂಥವರ ನೇತೃತ್ವವಿರುವ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಎಲ್ಲರೂ ಹೊರಗೆ ಬಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
1600 ರೈತ ವಿರೋಧಿ ಕಾನೂನುಗಳನ್ನು ತಿದ್ದುಪಡಿ ಮಾಡಿದ್ದಾರೆ. ಮೂರು ಕೃಷಿ ಕಾಯ್ದೆಯನ್ನು ರೈತರ ಆಕ್ರೋಶಕ್ಕೆ ತಡೆ ಹಿಡಿದಿದ್ದಾರೆ. ವೈಯಕ್ತಿಕ ಸ್ವಾತಂತ್ರ್ಯವನ್ನೂ ಹರಣ ಮಾಡುತ್ತಿರುವ ಇಂಥ ರಾಜ್ಯ ಮತ್ತು ಕೇಂದ್ರ ಸರ್ಕಾರ ನಮಗೆ ಬೇಕೆ ಎಂದು ಅವರು ಪ್ರಶ್ನಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಡಿ. ಬಿ. ಇನಾಮದಾರ ಮಾತನಾಡಿ, ರೈತ ಬೆಳೆದ ಬೆಳೆಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ. ಗೋಧಿ, ಭತ್ತ ಮತ್ತು ಕಬ್ಬು ಹೊರತು ಪಡಿಸಿದರೆ ಒಣಬೇಸಾಯ ಮಾಡುತ್ತಿರುವ ಬೆಳೆಗಾರರ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿಲ್ಲ. ರೈತನಿಗಾಗುತ್ತಿರುವ ನೋವು ನನ್ನ ಅನುಭವಕ್ಕೂ ಬಂದಿದೆ ಎಂದು ವಿವರಿಸಿದರು.
ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದರೆ ಈ ಸರ್ಕಾರದ ಬಳಿ ಚಿಕಿತ್ಸೆ ಇಲ್ಲವಾಗಿದೆ. ಮೊರ್ಬಿ ಸೇತುವೆ ಬಿದ್ದು ಜನರು ಸತ್ತರೆ ಕಣ್ಣೀರು ಸುರಿಸುವ ಮೋದಿ, ದೆಹಲಿ ಗಡಿಯಲ್ಲಿ 730ಕ್ಕೂ ಹೆಚ್ಚು ರೈತರು ಹೋರಾಟದಲ್ಲಿ ಸತ್ತರೆ ಅವರ ಬಗ್ಗೆ ಹನಿ ಕಣ್ಣೀರು ಸುರಿಸಲಿಲ್ಲ ಎಂದು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಏನೂ ಕೆಲಸವಾಗಿಲ್ಲ ಎಂದು ಬಿಜೆಪಿ ಆರೋಪಿಸುತ್ತಾರೆ. ಐಐಟಿ, ಜಲಾಶಯ, ಉದ್ಯಮ ಸ್ಥಾಪನೆ ಮಾಡಿದವರು ಯಾರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡ ಹಬೀಬ ಶಿಲೇದಾರ ಮಾತನಾಡಿ, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವ ನಿರ್ಣಯವನ್ನು ರೈತಸಂಘದ ಕಾರ್ಯಕರ್ತರು ಕೈಗೊಂಡಿರುವುದು ಐತಿಹಾಸಿಕ ನಿರ್ಣಯವಾಗಿದೆ. ದೇಶದ ರೈತರಲ್ಲಿ ಇಂಥ ಚಿಂತನೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನನ್ನ ಜೊತೆಗೂ ಕೆಲವು ರೈತ ಸಂಘಟನೆಗಳು ಸಂಪರ್ಕದಲ್ಲಿವೆ. ಕಾಂಗ್ರೆಸ್ ಬೆಂಬಲಿಸುವಂತೆ ಅವರನ್ನೂ ಮನ ಒಲಿಸಲಾಗುವುದು ಎಂದರು.
ರೈತ ಮುಖಂಡ ಶಿವಾನಂದ ಹೊಳೆಹಡಗಲಿ ಮಾತನಾಡಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರೈತರ ಮಕ್ಕಳನ್ನು ಬಿಜೆಪಿ ಸರ್ಕಾರ ದಾರಿ ತಪ್ಪಿಸುತ್ತಿದೆ. ದುಡ್ಡು, ಹೆಂಡ ಹಂಚಿ ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದು ಟೀಕಿಸಿದರು.
ಮುಖಂಡರಾದ ಸಿದ್ದಣ್ಣ ಕಂಬಾರ, ಅಪ್ಪೇಶ ದಳವಾಯಿ, ನಿಂಗಪ್ಪ ತಡಕೋಡ, ಕಲ್ಲಪ್ಪ ಕುಗಟಿ, ಮಹಾಂತೇಶ ರಾವುತ್, ಭೀಮಪ್ಪ ಕಾಸಾಯಿ ಮಾತನಾಡಿದರು.
ಶಂಕರ ಹೊಳಿ, ಮಹಾಬಳೇಶ್ವರ ದಳವಾಯಿ, ರಮೇಶ ಮೊಕಾಶಿ, ಫಕ್ಕೀರಪ್ಪ ದಳವಾಯಿ, ಮಡಿವಾಳಪ್ಪ ವರಗನ್ನವರ, ಜೈರುದ್ದೀನ್ ಜಮಾದಾರ, ಇತರರು ಇದ್ದರು. ಬಸವರಾಜ ದಳವಾಯಿ ಕಾರ್ಯಕ್ರಮ ನಿರೂಪಿಸಿದರು.
ಹಸಿರು ಟಾವೆಲ್‍ಗೆ ಮನಸೋತ ಧಣಿ
ಅಖಂಡ ಕರ್ನಾಟಕ ರೈತ ಸಂಘಟನೆ ಕಾರ್ಯಕರ್ತರು ನನ್ನ ಗೆಲುವಿಗಾಗಿ ದುಡಿಯುವ ಘೋಷಣೆ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಚಿರಋಣಿಯಾಗಿರುವೆ. ಅವರಿಟ್ಟ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ. ಅವರು ಕೈಗೊಳ್ಳುವ ಹೋರಾಟದಲ್ಲಿ ನಾನೂ ಪಾಲ್ಗೊಳ್ಳುತ್ತೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಡಿ. ಬಿ. ಇನಾಮದಾರ ಆಶ್ವಾಸನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘಟಕರು ಶಾಲು, ಮಾಲೆ ಮತ್ತು ಹಸಿರು ಟಾವೆಲ್ ಹಾಕಿ ಡಿ. ಬಿ. ಇನಾಮದಾರ ಅವರನ್ನು ಸತ್ಕರಿಸಲು ಹೊರಟರು. ಮಾಲೆ ಮತ್ತು ಶಾಲು ನನಗೆ ಬೇಡ. ಹಸಿರು ಟಾವೆಲ್ ಮಾತ್ರ ಹಾಕಿರಿ ಎಂದ ಕೇಳಿ ಕೊರಳಲ್ಲಿ ಹಾಕಿಸಿಕೊಂಡಿದ್ದು ವಿಶೇಷವಾಗಿತ್ತು.