ದಣಿವರಿಯದ ವಿತರಕ ಮಹಾದೇವ ತುರಮರಿ - Kittur


 ದಣಿವರಿಯದ ವಿತರಕ ಮಹಾದೇವ ತುರಮರಿ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಬಿಳಿ ಪಾಯಿಜಾಮು, ಮೇಲೆ ತೋಳು ಮಡಚಿದ ಅÀಂಗಿ, ಜೊತೆಗೊಂದು ಸೈಕಲ್, ಅದರ ಕ್ಯಾರಿಯರ್‍ಗೆ ಪತ್ರಿಕೆಯ ಬಂಡಲ್..

ಬೆಳಿಗ್ಗೆ ಬೇಗನೆ ಕಿತ್ತೂರು ಪಟ್ಟಣಕ್ಕೆ ಬಂದರೆ ಈ ವ್ಯಕ್ತಿಯನ್ನು ನೀವು ಕಾಣಬಹುದು. ಸೈಕಲ್ ಇವರಿಗೆ  ಜೀವನ ಸಂಗಾತಿ. ಪತ್ರಿಕೆಗಳ ವಿತರಣೆ ಇವರ ಜೀವನ. ಈ ವೃತ್ತಿಯ ಮೂಲಕ ಬದುಕು ಕಟ್ಟಿಕೊಂಡವರು ಮಹಾದೇವ ಗದಿಗೆಪ್ಪ ತುರಮರಿ.

ವಯಸ್ಸು 70 ದಾಟಿದೆ. ಪತ್ರಿಕೆ ವಿತರಣೆಯ ಉತ್ಸಾಹ ಇನ್ನೂ ಬತ್ತಿಲ್ಲ. ಸುಮಾರು 49 ವರ್ಷಗಳಿಂದ ಆಯಾ ಕಾಲಕ್ಕೆ ನಾಡು ಪ್ರತಿನಿಧಿಸಿದ ಪತ್ರಿಕೆಗಳನ್ನೆಲ್ಲ ಹಂಚುತ್ತಾ ಬಂದಿದ್ದಾರೆ. ಪತ್ರಿಕೆ ವಿತರಣೆಯ ಆಯಾ ಕಾಲಘಟ್ಟದ ಮಾಹಿತಿಗೆ ತುರಮರಿ ಜೀವಂತ ಸಾಕ್ಷಿಯಾಗಿದ್ದಾರೆ.

ಕುಲಕಸುಬು ನೇಕಾರಿಕೆ

ತುರಮರಿ ಅವರ ಕುಟುಂಬದ ಉದ್ಯೋಗ ನೇಕಾರಿಕೆ. ಲಾಭಕ್ಕಿಂತ ಇದರಲ್ಲಿ ಹಾನಿಯೇ ಹೆಚ್ಚಾಗಿತ್ತು. ಇದರಿಂದ ಮನನೊಂದು ಉದ್ಯೋಗದ ದಿಕ್ಕನ್ನು ಬದಲಿಸಿದÀರು. ಪತ್ರಿಕೆಯ ವಿತರಕರಾಗಿ ಮುಂದುವರೆದರು. 1972ರಿಂದಲೂ ನಿರಂತರವಾಗಿ ಸೈಕಲ್ ಮೇಲೆಯೇ ಪತ್ರಿಕೆ ಮನೆ, ಮನೆಗೆ ಹಾಕುತ್ತ ಬಂದಿದ್ದಾರೆ. ಇಷ್ಟು ದೀರ್ಘಕಾಲ ಅದೂ ಸೈಕಲ್ ತುಳಿಯುತ್ತ ಪತ್ರಿಕೆ ಹಾಕಿದವರು ಸಿಗುವುದು ಅಪರೂಪವಾಗಿದೆ. ಈ ಸೇವೆ ಗುರುತಿಸಿದ ಬೆಳಗಾವಿ ಜಿಲ್ಲಾಡಳಿತ ಇವರಿಗೆ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ನ. 1 ರಂದು ಬೆಳಗಾವಿಯಲ್ಲಿ ಗೌರವಿಸುತ್ತಿದೆ. 

ಕರ್ತವ್ಯ ಪ್ರಜ್ಞೆ

ನಿತ್ಯದ ಬೆಳಗಿನೊಂದಿಗೆ ಪತ್ರಿಕೆ ವಿತರಣೆ ಕಾರ್ಯಕ್ಕೆ ಅಣಿಯಾಗುವ ತುರಮರಿ ಅವರು, ಮೊದಲ ಆದ್ಯತೆ ಕರ್ತವ್ಯಕ್ಕೆ ನೀಡುತ್ತಾರೆ. ಬೆಳಿಗ್ಗೆ ಬದುಕಿನಲ್ಲಿ ನೋವು, ನಲಿವು ಏನೇ ಸಂಭವಿಸಲಿ ಎಲ್ಲವನ್ನೂ ಮರೆಯುತ್ತಾರೆ. ಓದುಗರಿಗೆ ಪತ್ರಿಕೆ ತಲುಪಿಸಲು ಹೆಚ್ಚು ಇಚ್ಛೆ ಪಡುತ್ತಾರೆ.

ಬಹಳ ವರ್ಷಗಳ ಹಿಂದೆ ಮನೆಯಲ್ಲಿ ದೊಡ್ಡ ದುರಂತ ಸಂಭವಿಸಿತ್ತು. ಮಗಳು ಸಾವನ್ನಪ್ಪಿದ್ದಳು. ಒಂದೆಡೆ ದುಃಖ ಭರಿತ ಸಂಬಂಧಿಗಳಿದ್ದರು. ಮತ್ತೊಂದೆಡೆ ಪತ್ರಿಕೆ ಬಂಡಲ್ ಬಂದು ಬಿದ್ದಿತ್ತು. ಈ ಸಂದರ್ಭದಲ್ಲೂ ಸ್ಥಿತಪ್ರಜ್ಞರಾಗಿ ಕರ್ತವ್ಯಕ್ಕೆ ಆದ್ಯತೆ ನೀಡಿದರು. ಪತ್ರಿಕೆ ವಿತರಿಸಿ ಕರ್ತವ್ಯ ಪ್ರಜ್ಞೆ ಮೆರೆದರು. ಅನಂತರ ಮಗಳ ಅಂತ್ಯಕ್ರಿಯೆ ಮಾಡುವಲ್ಲಿ ಧಾವಿಸಿದ್ದರು.

ಇತ್ತೀಚೆಗೆ ನಡೆದ ಮಗನ ಮದುವೆಯ ಸಂದರ್ಭದಲ್ಲೂ ಪತ್ರಿಕೆ ಹಂಚಿ ಬಂದು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಪತ್ರಿಕೆ ತುರಮರಿ ಅವರಿಗೆ ಅನ್ನ ನೀಡಿದೆ. ಬದುಕು ಕಟ್ಟಿಕೊಟ್ಟಿದೆ. ಸ್ವಾಭಿಮಾನ ತಂದುಕೊಟ್ಟಿದೆ. ಹೀಗಾಗಿ ಅವರದು ಪತ್ರಿಕೆ ವಿತರಣೆಯಲ್ಲಿ ಪ್ರಶ್ನಿಸಲಾಗದ ಅಚಲ ನಿಷ್ಠೆ.

ಸೇವೆ ಗುರುತಿಸಿ ಈ ಗೌರವ ನೀಡಿದ ಜಿಲ್ಲಾಡಳಿತಕ್ಕೆ ಹೃದಯಪೂರ್ವಕ ಕೃತಜ್ಞತೆಗಳು. ಇದು ಮರೆಯಲಾಗದ ಕ್ಷಣ. ಇದಕ್ಕೆ ಕಾರಣರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ಪದಾಧಿಕಾರಿಗಳಿಗೆ, ಸದಸ್ಯರಿಗೆ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ

ಮಹಾದೇವ ತುರಮರಿ

0/Post a Comment/Comments