ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಸಕ್ತಿ, ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಉತ್ಸಾಹ ಮತ್ತು ಒತ್ತಾಸೆಯಿಂದಾಗಿ ಕಿತ್ತೂರು ಉತ್ಸವ ಈ ಬಾರಿ ರಾಜ್ಯಮಟ್ಟದ ಉತ್ಸವ ಆಗಿ ಮಾರ್ಪಾಟುಗೊಂಡಿದ್ದು, ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಉತ್ಸವ ಯಶಸ್ಸಿಗಾಗಿ 15 ಉಪಸಮಿತಿಗಳನ್ನು ರಚಿಸಲಾಗಿದೆ. ಇಲ್ಲಿಯವರೆಗೆ ಅವು ಮಾಡಿಕೊಂಡ ಸಿದ್ಧತೆಗಳ 'ಪ್ರಗತಿ ಪರಿಶೀಲನ ಸಭೆ' ಮಂಗಳವಾರ ಇಲ್ಲಿಯ ಕೋಟೆ ಆವರಣದಲ್ಲಿ ನಡೆಯಿತು.
ಅ. 23ರಂದು ಪಟ್ಟಣದಲ್ಲಿ ನಡೆಯಲಿರುವ ವಿಜಯಜ್ಯೋತಿ ಯಾತ್ರೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭವಾದ್ದರಿಂದ 750 ಕುಂಭಹೊತ್ತ ಮಹಿಳೆಯರು, 75ರೂಪಕಗಳು ಭಾಗವಹಿಸಲಿವೆ. ಸೈನಿಕ ಶಾಲೆ ವಿದ್ಯಾರ್ಥಿನಿಯರು, ಪೊಲೀಸರ ಆಕರ್ಷಕ ಪಥಸಂಚಲನ ನಡೆಯಲಿದೆ. ಕಲಾ ತಂಡಗಳು ಭಾಗವಹಿಸಿ ನಾಡಿನ ಸಂಸ್ಕøತಿ ಶ್ರೀಮಂತಿಕೆಯನ್ನು ಸಾದರಪಡಿಸಲಿವೆ. ಗಜರಾಜ ಮೆರವಣಿಗೆ ಮುಂಚೂಣಿಯಲ್ಲಿರುವಂತೆ ಯೋಚಿಸಲಾಗುತ್ತಿದೆ. ಕುದುರೆ ಕರೆತರುವ ಪ್ರಯತ್ನ ನಡೆದಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಸಭೆಯಲ್ಲಿ ತಿಳಿಸಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಇಓ ಸುಭಾಸ ಸಂಪಗಾಂವಿ, ಕನ್ನಡ, ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಿಡಿಪಿಐ ಬಸವರಾಜ ನಾಲತವಾಡ, ಪ್ರಾಧಿಕಾರ ಸದಸ್ಯ ಉಳವಪ್ಪ ಉಳ್ಳಾಗಡ್ಡಿ, ವಸ್ತುಪ್ರದರ್ಶನ ಮಳಿಗೆ, ಸಾರಿಗೆ, ವಿಚಾರಗೋಷ್ಟಿ, ಕ್ರೀಡೆ, ಆಹಾರ, ವೇದಿಕೆ, ಬೆಳಕು, ಪ್ರಚಾರ ಉಪಸಮಿತಿಯವರು, ಪತ್ರಕರ್ತರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಸಿಎಂ ಚಾಲನೆ
ಅ. 2 ರಂದು ಬೆಂಗಳೂರಿನಲ್ಲಿ ರಾಣಿ ಚನ್ನಮ್ಮ ಪ್ರತಿಮೆ ಬಳಿ ಅಭಿಮಾನ, ಗೌರವದಿಂದ ವಿಜಯಜ್ಯೋತಿ ಯಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಅದು ಸಂಚರಿಸಲಿದೆ. ಅ. 23ರಂದು ಉತ್ಸವಕ್ಕೂ ಅವರೇ ಚಾಲನೆ ನೀಡಲಿದ್ದಾರೆ ಎಂದು ದೊಡ್ಡಗೌಡರ ಹೇಳಿದರು.
ಬೆಳಿಗ್ಗೆ 11 ಗಂಟೆಗೆ ಅಧಿಕಾರಿಳೊಂದಿಗೆ ಇಲ್ಲಿಗೆ ಆಗಮಿಸಿ ಬೋಟಿಂಗ್, ಕುಸ್ತಿ ಕಣ, ಪೆಂಡಾಲ ಹಾಕುವ ಮೈದಾನ ವೀಕ್ಷಿಸಿ ಅಲ್ಲಿ ಮಾಡಿಕೊಳ್ಳುವ ಸಿದ್ಧತೆಗಳನ್ನು ಚರ್ಚಿಸಲಾಯಿತು. ಅ. 23 ರಂದು ತಾಲೂಕು ಆಡಳಿತ ಸೌಧ ಉದ್ಘಾಟನೆಗೊಳ್ಳಲಿದ್ದು ಆ ಸ್ಥಳದ ವೀಕ್ಷಣೆ ಮಾಡಲಾಯಿತು. ಸುಮಾರು ಎರಡೂವರೆ ತಾಸು ಸಂಚರಿಸಿ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಸಲಹೆ ನೀಡಲಾಯಿತು ಎಂದರು.
ಬೇರೆಯವರಿಗೆ ಮಾದರಿ ಆಗುವಂತೆ ಅಚ್ಚುಕಟ್ಟಾಗಿ ಉತ್ಸವ ಆಚರಣೆ ಮಾಡಿ ತೋರಿಸಬೇಕಿದೆ. ಎಲ್ಲರೂ ಉತ್ಸವ ಯಶಸ್ಸಿಗಾಗಿ ಪ್ರಯತ್ನಿಸಬೇಕು. ಸಕ್ರಿಯವಾಗಿ ಜನರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಎಪಿಎಂಸಿಯಲ್ಲಿ 100 ಪ್ರದರ್ಶನ ಮತ್ತು ವ್ಯಾಪಾರ ಮಳಿಗೆ ನಿರ್ಮಿಸಲಾಗುವುದು. ಕೃಷಿ, ಹೂವು ಪ್ರದರ್ಶನ ಮಳಿಗೆ ಇರಲಿದೆ. ಬೆಳಗಾವಿಯ ತಿನಿಸುಕಟ್ಟೆ ಬರಲಿದೆ ಎಂದು ಮಾಹಿತಿ ನೀಡಿದರು.
Post a Comment