ಸಾಮಾನ್ಯರ ಸಮಸ್ಯೆ ಪರಿಹಾರಕ್ಕಾಗಿ ಅ. 11ಕ್ಕೆ ಪಾದಯಾತ್ರೆ - Kittur


 ಸಾಮಾನ್ಯರ ಸಮಸ್ಯೆ ಪರಿಹಾರಕ್ಕಾಗಿ ಅ. 11ಕ್ಕೆ ಪಾದಯಾತ್ರೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಗ್ರಾಮಾಂತರ ಪ್ರದೇಶದಲ್ಲಿ ಜನಸಾಮಾನ್ಯರು ನಿತ್ಯ ಎದುರಿಸುತ್ತಿರುವ  ಸಮಸ್ಯೆಗಳ ಪರಿಹಾರಕ್ಕಾಗಿ ಅಕ್ಟೋಬರ್ 11 ರಿಂದ ಮೂರು ಹಂತದಲ್ಲಿ ಪಾದಯಾತ್ರೆ ನಡೆಸಿ ಅಧಿಕಾರಿಗಳ ಗಮನ ಸೆಳೆಯಲು ನಿರ್ಧರಿಸಲಾಗಿದೆ   ಎಂದು ಸಮಾಜಸೇವಕ ಮತ್ತು ಕಾಂಗ್ರೆಸ್ ಮುಖಂಡ ಹಬೀಬ ಶಿಲೇದಾರ ಘೋಷಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ಹಳ್ಳಿ ಜನರ ಕನಿಷ್ಟ ಸಮಸ್ಯೆಗಳನ್ನು  ಕೇಳುವವರೇ ಇಲ್ಲವಾಗಿದ್ದಾರೆ. ಹೀಗಾದರೆ ಬಡವರು ಎಲ್ಲಿಗೆ ಹೋಗಬೇಕು  ಎಂದು ಪ್ರಶ್ನಿಸಿದರು.

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಉಪಕರಣದಂತಹ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಪಾಸ್ ಸರಿಯಾಗಿ ವಿತರಿಸುತ್ತಿಲ್ಲ, ಬಿದ್ದ ಮನೆಗಳಿಗೆ ಪರಿಹಾರ ಇನ್ನೂ ದೊರೆತಿಲ್ಲ. ಮನೆ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ.  ಜನಸಾಮಾನ್ಯರ ಇಂಥ ಸಮಸ್ಯೆಗಳ ಬಗ್ಗೆ ಪಾದಯಾತ್ರೆ ನಡೆಸಿ  ತಹಶೀಲ್ದಾರ್ ಗಮನ ಸೆಳೆಯಲಾಗುವುದು.  ಇವುಗಳ ಪರಿಹಾರಕ್ಕಾಗಿ ತಾಲ್ಲೂಕು ಆಡಳಿತಕ್ಕೆ ಗಡುವು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಥಮ ಹಂತವಾಗಿ ಕಡತನಾಳ, ತುರಮರಿ, ಕುಲಮನಟ್ಟಿ, ಸವಟಗಿ, ಖೋದಾನಪುರ, ಗುಡಿಕೊಟಬಾಗಿ, ಕಲಬಾವಿ,  ಹಿರೇನಂದಿಹಳ್ಳಿ ಚಿಕ್ಕನಂದಿಹಳ್ಳಿ, ಜಮಳೂರು, ಅವರಾದಿ, ಮಲ್ಲಾಪುರ, ಎತ್ತಿನಕೇರಿ, ದೇಮಟ್ಟಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಯಲಿದೆ. ಕಿತ್ತೂರಿಗೆ ಬಂದು ತಹಶೀಲ್ದಾರ್ ಅವರಲ್ಲಿ ಪರಿಹಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಅವರ ಅಧಿಕಾರ   ವ್ಯಾಪ್ತಿಯಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳು ಇರುವುದರಿಂದ ಇತ್ಯರ್ಥ ಪಡಿಸಲು ಹತ್ತು  ದಿನಗಳ  ಗಡುವು ನೀಡಲಾಗುವುದು. ಪರಿಹಾರವಾಗದಿದ್ದರೆ ಒಂದು ದಿನ ತಹಶೀಲ್ದಾರ್ ಕಚೇರಿ ಎದುರು  ಧರಣಿ  ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು. .  

2ನೇ ಹಂತದಲ್ಲಿ ಎಂ. ಕೆ. ಹುಬ್ಬಳ್ಳಿ, ವೀರಾಪುರ, ಅಮರಾಪುರ, ದಾಸ್ತಿಕೊಪ್ಪ, ಕಾದ್ರೊಳ್ಳಿ, ಹುಣಸೀಕಟ್ಟಿ, ತುರಮರಿ, ದೇವರಶೀಗಿಹಳ್ಳಿ, ಅಂಬಡಗಟ್ಟಿ, ಉಗರಕೋಡ, ಬಚ್ಚನಕೇರಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ.

3ನೇ ಹಂತದಲ್ಲಿ  ಬೈಲೂರು, ದೇಗುಲಹಳ್ಳಿ, ದೇಗಾಂವ, ಲಿಂಗದಳ್ಳಿ, ಬಸರಕೋಡ, ತಿಗಡೊಳ್ಳಿ, ಹೊನ್ನಾಪುರ ಹಳ್ಳಿಗಳಲ್ಲಿ ಪಾದಯಾತ್ರೆ ಸಾಗಲಿದೆ ಎಂದು ವಿವರಿಸಿದರು.

ಮುಖಂಡರಾದ ಪುಂಡಲೀಕ ನೀರಲಕಟ್ಟಿ, ಮಹಾಂತೇಶ ಕಂಬಾರ, ವಿಜಯಕುಮಾರ ಶಿಂಧೆ, ರಮೇಶ ಮೊಕಾಶಿ, ಅಬ್ದುಲ್ ಮುಲ್ಲಾ, ಕುಮಾರ ಹಿರೇಮಠ ಸುನೀಲ ಸಂಬಣ್ಣವರ ಉಪಸ್ಥಿತರಿದ್ದರು.