ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಜಾನುವಾರುಗಳಿಗೆ ಮಾರಕವಾಗಿರುವ ಚರ್ಮಗಂಟು ರೋಗದ ಕುರಿತು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಜಾಗೃತಿ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ರೈತ ಮುಖಂಡ ಈಶಪ್ರಭು ಬಾಬಾಗೌಡ ಪಾಟೀಲ ಸಲಹೆ ನೀಡಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಈ ಬೇನೆಯ ಪ್ರಹಾರದಿಂದಾಗಿ ರೈತಕುಲವೇ ತೀವ್ರ ಆತಂಕಕ್ಕೆ ಒಳಗಾಗಿದೆ ಎಂದರು.
ಎತ್ತು, ಹಸು ಮತ್ತು ಎಮ್ಮೆ ಅನ್ನದಾತನ ಸಂಗಾತಿಗಳು. ಅವುಗಳಿಲ್ಲದೆ ಆತನ ಬದುಕು ಕಲ್ಪಿಸುವುದು ಅಸಾಧ್ಯ. ಹಸು ಮತ್ತು ಎಮ್ಮೆ ಸಾಕಾಣಿಕೆ ಮಾಡಿ ಹೈನುಗಾರಿಕೆಯಿಂದ ವಾರದ ಸಂತೆಯನ್ನು ಸಾಗಿಸುವ ಅದೆಷ್ಟೋ ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಈ ರೋಗದ ಭೀತಿಯಿಂದಾಗಿ ಅವರೂ ಕಂಗಾಲಾಗಿದ್ದಾರೆ ಎಂದು ಅವರು ವಿಷಾದಿಸಿದರು.
ಈ ರೋಗ ಬಂದರೆ ಹೈನುಗಾರಿಕೆ ಕುಂಠಿತವಾಗುತ್ತದೆ. ಉಲ್ಬಣಗೊಂಡರೆ ರೈತನ ಸಂಗಾತಿಗಳಾದ ಇವು ಬದುಕುವುದೇ ಕಷ್ಟ ಎನ್ನುವಂತಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ರೈತರಲ್ಲಿ ಅದರಲ್ಲೂ ಹೈನುಗಾರಿಕೆ ನಂಬಿ ಬದುಕುತ್ತಿರುವ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ಅವರಲ್ಲಿ ಮನೆ ಮಾಡಿರುವ ಆತಂಕವನ್ನು ದೂರ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಎಲ್ಲಿವೆ ಆಂಬ್ಯುಲೆನ್ಸ್?
ಪಶು ಚಿಕಿತ್ಸೆಗಾಗಿ ಇಲಾಖೆ ತಂದಿರುವ ಪಶು ಆಂಬ್ಯುಲೆನ್ಸ್ ಎಲ್ಲಿ ಓಡಾಡುತ್ತಿವೆ ಎಂಬುದನ್ನು ರೈತರು ಇಲ್ಲಿಯವರೆಗೆ ನೋಡಿಯೇ ಇಲ್ಲ ಎಂದು ಆರೋಪಿಸಿದ ಅವರು, ಅಧಿಕಾರಿಗಳು ಈ ಬಗ್ಗೆಯೂ ಜನರಲ್ಲಿ ತಿಳಿವಳಿಕೆ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.