ದೊಡ್ಡಗೌಡರ ಜನ್ಮದಿನ: ಹರಿದು ಬಂದ ಜನಪ್ರವಾಹ - Kittur


ದೊಡ್ಡಗೌಡರ ಜನ್ಮದಿನ: ಹರಿದು ಬಂದ ಜನಪ್ರವಾಹ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಎಂ. ಕೆ. ಹುಬ್ಬಳ್ಳಿಯ ಹೊರವಲಯದಲ್ಲಿ ಗೆಳೆಯರು ಮತ್ತು ಹಿತೈಷಿಗಳ ಬಳಗ ಶುಕ್ರವಾರ ಹಮ್ಮಿಕೊಂಡಿದ್ದ ಶಾಸಕ ಮಹಾಂತೇಶ ದೊಡ್ಡಗೌಡರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಶುಭ ಹಾರೈಸಲು ಜನಪ್ರವಾಹವೇ ಹರಿದು ಬಂದಿತ್ತು.

ಉಚಿತ ಆರೋಗ್ಯ ತಪಾಸಣೆ, ಮುಖ್ಯ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆ, ಅದರ ಪಕ್ಕಕ್ಕೆ ಹಾಕಲಾಗಿದ್ದ ಬೂರಿ ಭಕ್ಷ್ಯಗಳಿದ್ದ ಊಟದ ಶಾಮಿಯಾನ್.. ಹೀಗೆ ಎಲ್ಲಿ ನೋಡಿದಲ್ಲೆಡೆ ಜನಸಾಗರವೇ ಕಾಣುತ್ತಿತ್ತು. ಕಿತ್ತೂರು, ಬೈಲಹೊಂಗಲ, ಬೆಳಗಾವಿ ತಾಲೂಕಿನ ಎಲ್ಲ ರಸ್ತೆಗಳು ಎಂ. ಕೆ. ಹುಬ್ಬಳ್ಳಿ ಕಡೆಗೆ ತಿರುಗಿದ್ದವು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಬೃಹತ್ ಜನಸ್ತೋಮ ಶಾಸಕರ ಜನ್ಮದಿನಾಚರಣೆಗೆ ಸಾಕ್ಷಿಯಾಯಿತು. ಹೊಸ ದಾಖಲೆಯನ್ನೂ ಬರೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರ ಮಾತುಗಳು 2023ರ ವಿಧಾನಸಭೆ ಚುನಾವಣೆಯ ಪೂರ್ವಸಿದ್ಧತೆಯ ರಣಕಹಳೆ ಮೊಳಗಿಸಿದಂತಿದ್ದವು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಗದಗ ತೋಂಟದಾರ್ಯಮಠದ ಡಾ. ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿ, ಮಹಾಂತೇಶ ದೊಡ್ಡಗೌಡರ ಅವರು ಈ ಭಾಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಅವರು ಜನರ ಕಷ್ಟಗಳನ್ನು ಅರಿತಿದ್ದಾರೆ. ಜನಕಲ್ಯಾಣಕ್ಕಾಗಿ ಏನು ಮಾಡಬೇಕು ಎಂದು ತಿಳಿದುಕೊಂಡು ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಶಾಸಕರು ಹಮ್ಮಿಕೊಂಡಿರುವ ಕೆಲಸಗಳು ಮಾದರಿಯಾಗಿವೆ ಎಂದು ಬಣ್ಣಿಸಿದರು. 
ಇಂಚಲ ಸಾಧುಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಾದ್ರೊಳ್ಳಿ ಸೀಮಿಮಠದ ಡಾ. ಪಾಲಾಕ್ಷ ಶಿವಯೋಗೀಶ್ವರ ಸ್ವಾಮೀಜಿ, ಗುರುಪುತ್ರ ಮಹಾರಾಜರು, ಮುರುಗೋಡ ನೀಲಕಂಠ ಸ್ವಾಮೀಜಿ, ಬೈಲಹೊಂಗಲ ಮೂರುಸಾವಿರ ಮಠದ ನೀಲಕಂಠೇಶ್ವರ ಸ್ವಾಮೀಜಿ, ಗುಡ್ಡಾಪುರ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಬೈಲಹೊಂಗಲದ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ನಯಾನಗರ,  ಮಲ್ಲಾಪುರ ಕೆಎನ್. ಯರಗೊಪ್ಪ, ಹಅಣ್ಣಿಕೇೀರಿ, ಬಾಂವಿಹಾಳ ಶ್ರೀಗಳು ಮಾತನಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ ಅವರು ನೀರಾವರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಕಾರ್ಯ ಕೊಂಡಾಡಿದರು. 
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿದ್ದಾರೆ. ತಾಳ್ಮೆಯ ಗುಣದ ಮೂಲಕ ಜನಪ್ರೀತಿಯ ಎತ್ತರ ಶಿಖರವನ್ನು ಮಹಾಂತೇಶ ಏರಿದ್ದಾರೆ ಎಂದರು.
ಕೆಎಲ್‍ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ,  ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳಯಲಿ ಎಂದು ಹಾರೈಸಿದರು.
ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಅನಿಲ ಬೆನಕೆ, ಅಮೃತ ದೇಸಾಯಿ, ಹನುಮಂತ ನಿರಾಣಿ, ಡಾ. ವಿ. ಐ. ಪಾಟೀಲ. ಜಗದೀಶ ಮೆಟಗುಡ್ಡ, ಶ್ರೀಶೈಲ್ ಮೆಟಗುಡ್ಡ, ಮಾರುತಿ ಅಷ್ಟಗಿ ಸೇರಿ ರಾಜಕೀಯ ಕ್ಷೇತ್ರದ ಅನೇಕ ಗಣ್ಯರು ಪಾಲ್ಗೊಂಡು ದೊಡ್ಡಗೌಡರಿಗೆ ಶುಭಕೋರಿದರು. 

15ಸಾವಿರ ಜನರ ಆರೋಗ್ಯ ತಪಾಸಣೆ
 ಶಾಸಕ ಮಹಾಂತೇಶ ದೊಡ್ಡಗೌಡರ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆಯಲ್ಲಿ ಸುಮಾರು 15 ಸಾವಿರ ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಚಿಕ್ಕಮಕ್ಕಳ ತಜ್ಞರು, ನೇತೃ ತಜ್ಞರು, ಹೃದ್ರೋಗ, ಮಧುಮೇಯ ಸೇರಿ ವಿವಿಧ ವಿಭಾಗಗಳ 50ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಯಡಿಯೂರಪ್ಪ, ರಾಜಕೀಯ ಗುರು ಲಕ್ಷ್ಮಣ ಸವದಿ, ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ ಸೇರಿ ಅನೇಕರು ನನಗೆ ರಾಜಕೀಯವಾಗಿ ಬೆಳೆಯಲು ನೆರವಾಗಿದ್ದಾರೆ ಎಂದು ಅವರ ಸಹಕಾರವನ್ನು ಸ್ಮರಿಸಿದರು.
ಶಾಸಕನಾಗಿ ಆಯ್ಕೆಯಾಗಿ ಬಂದ ನಂತರ ನೀರಾವರಿ, ರಸ್ತೆ ಅಭಿವೃದ್ಧಿ, ಹೊಲಕ್ಕೆ ಹೋಗುವ ರಸ್ತೆ, ಸಮುದಾಯ ಭವನ, ಶಾಲಾ ಕೊಠಡಿಗಳ ನಿರ್ಮಾಣ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ್ದು ಸೇರಿ ಹತ್ತು, ಹಲವಾರು ಅಭಿವೃದ್ಧಿ ಮತ್ತು ಜನಹಿತ ಪರ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಶಾಸಕರ ಜನ್ಮದಿನ ನಿಮಿತ್ತ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 232 ಯುವಕರು ರಕ್ತದಾನ ಮಾಡಿದರು.