ಕಿತ್ತೂರು ಉತ್ಸವ 3 ದಿನ: ರೂ. 2 ಕೋಟಿ ಅನುದಾನ - Kittur

ಕಿತ್ತೂರು ಉತ್ಸವ 3 ದಿನ: ರೂ. 2 ಕೋಟಿ ಅನುದಾನ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಜಿಲ್ಲಾ ಮಟ್ಟದ ಉತ್ಸವವಾಗಿ ಆಚರಿಸಿಕೊಂಡು ಬರಲಾಗಿದ್ದ ರಾಣಿ ಚನ್ನಮ್ಮನ ಕಿತ್ತೂರು ಉತ್ಸವ ಈ ಬಾರಿಯಿಂದ ರಾಜ್ಯಮಟ್ಟದ ಉತ್ಸವವಾಗಿ ಪರಿವರ್ತನೆಗೊಂಡಿದ್ದು, ಅದ್ಧೂರಿ ಆಚರಣೆಗಾಗಿ ಸರ್ಕಾರ ರೂ. 2 ಕೋಟಿ ಅನುದಾನ ನೀಡಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.

ಇಲ್ಲಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅ. 23ರಿಂದ 25 ರವರೆಗೆ ನಡೆಯಲಿರುವ ಉತ್ಸವದ ಕಾರ್ಯಕ್ರಮಗಳಿಗಾಗಿ ಮೂರು  ವೇದಿಕೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಿದರು.

ಕೋಟೆ ಆವರಣದೊಳಗೆ ಮುಖ್ಯ ವೇದಿಕೆ,  ಕಲ್ಮಠದ ಆವರಣದಲ್ಲಿ ಹಾಗೂ ದೊರೆಗಳ ಸಮಾಧಿ ಸ್ಥಳದ ಬಳಿ ಇರುವ ಕಿತ್ತೂರು ಸೈನಿಕ ಶಾಲೆಯವರ ಜಾಗೆಯಲ್ಲಿ ಎರಡು ಸಮಾನಾಂತರ ವೇದಿಕೆ ನಿರ್ಮಾಣಗೊಳ್ಳಲಿವೆ ಎಂದು ವಿವರಿಸಿದರು.

ಉತ್ಸವ ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುವರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉತ್ಸವಕ್ಕೆ ಕರೆಸುವ ಚಿಂತನೆ ನಡೆದಿದೆ. ಅಂತರಾಷ್ಟ್ರೀಯ, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾವಿದರು ಸಾಂಸ್ಕøತಿಕ ಕಾರ್ಯಕ್ರಮ ನೀಡಲಿದ್ದಾರೆ. ಸ್ಥಳೀಯ ಕಲಾವಿದರಿಗೆ ಸಾಕಷ್ಟು ಅವಕಾಶ ನೀಡಲಾಗುವುದು. ರಾಷ್ಟ್ರಮಟ್ಟದ ಕುಸ್ತಿಪಟುಗಳು, ಇತರ ವಿಭಾಗದ ಕ್ರೀಡಾಸ್ಪರ್ಧೆಗಳಿಗೆ ಖ್ಯಾತ ಕ್ರೀಡಾಪಟುಗಳು ಭಾಗವಹಿಸುವರು. ವಿಚಾರಗೋಷ್ಟಿ, ಕವಿಗೋಷ್ಟಿ ಉತ್ಸವದ ಪ್ರಮುಖ ಆಕರ್ಷಣೆಯಾಗಿವೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ರಾಜ್ಯಮಟ್ಟದ ಉತ್ಸವವಾಗಿ  ಆಚರಣೆ ಮಾಡಬೇಕೆಂಬುದು ಇಲ್ಲಿಯ ಜನತೆಯ ಬಹು ದಿನದ ಬೇಡಿಕೆಯಾಗಿತ್ತು. ಹಿಂದೆ ನಡೆದ ಪೂರ್ವಭಾವಿ  ಸಭೆಯಲ್ಲಿ ರಾಜ್ಯಮಟ್ಟದ ಉತ್ಸವವಾಗಿ ಆಚರಣೆ ಮಾಡಬೇಕು. ರೂ. 5 ಕೋಟಿ ಅನುದಾನ ನೀಡಬೇಕು ಎಂಬುದು ಆಗ್ರಹವಾಗಿತ್ತು. ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಪ್ರಯತ್ನದಿಂದ ರಾಜ್ಯಮಟ್ಟದ ಉತ್ಸವ ಈಗ ನೆರವೇರುತ್ತಿದೆÉ ಎಂದರು. 

ಉತ್ಸವದ ಯಶಸ್ಸಿಗಾಗಿ 15 ಉಪಸಮಿತಿ ರಚಿಸಲಾಗಿದೆ.    ಆಚರಣೆಗಾಗಿ ನಿರ್ಮಾಣಗೊಳ್ಳಲಿರುವ ಮೂರು ವೇದಿಕೆಗಳಿಗೆ ಮೂವರು ಮಹಾನ್ ನಾಯಕರ ನಾಮಕರಣ ಮಾಡಲಾಗುವುದು. ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಉತ್ಸವಕ್ಕೆ ವ್ಯಾಪಕ ಪ್ರಚಾರ ನೀಡಲಾಗುವುದು ಎಂದು ತಿಳಿಸಿದರು. 

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ  ಪಂಚಾಯ್ತಿ   ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್, ಡಿವೈಎಸ್‍ಪಿ ಶಿವಾನಂದ ಕಟಗಿ, ಬೆಳಗಾವಿ ಎಸಿ. ರವೀಂದ್ರ ಕರಿಲಿಂಗನವರ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಡಿಡಿಪಿಐ ಬಸವರಾಜ ನಾಲತ್ತವಾಡ, ಇಓ ಸುಭಾಸ ಸಂಪಗಾಂವಿ, ಮುಖ್ಯಾಧಿಕಾರಿ ಪ್ರಕಾಶ ಮಠದ,  ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಉಳವಪ್ಪ ಉಳ್ಳಾಗಡ್ಡಿ ಉಪಸ್ಥಿತರಿದ್ದರು.

ಉಪವಿಭಾಗಾಧಿಕಾರಿ  ಶಶಿಧರ  ಬಗಲಿ ಸ್ವಾಗತಿಸಿದರು. ಕನ್ನಡ, ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಕದಂ ನಿರೂಪಿಸಿದರು. 

ಕಿತ್ತೂರು ಹಾಗೂ ಸುತ್ತಲಿನ ಸಾರ್ವಜನಿಕರು, ಯುವಕರು ಮಾತನಾಡಿ ಉತ್ಸವದ ಯಶಸ್ಸಿಗಾಗಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.


ಅ. 2 ರಂದು ‘ಜ್ಯೋತಿ'ಗೆ ಚಾಲನೆ

ಅ. 2ರಂದು ಗಾಂಧಿ ಜಯಂತಿಯಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಿಂದ ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ್ಯೋತಿಗೆ ಹಸಿರು ನಿಶಾನೆ ತೋರುವರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಯಾತ್ರೆ ಸಂಚರಿಸಲಿದೆ. ಎಲ್ಲ 31 ಜಿಲ್ಲೆಗಳ ಜಿಲ್ಲಾಧಿಕಾರಿ ಅವರಿಗೆ ಜ್ಯೋತಿ ಸ್ವಾಗತಿಸಲು ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭವಾದ್ದರಿಂದ ಅಲ್ಲಿ ಕಾರ್ಯಕ್ರಮ ನಡೆಸಿ ಸ್ವಾತಂತ್ರ್ಯಯೋಧರ ಸತ್ಕರಿಸಲು ಸರ್ಕಾರ  ಜಿಲ್ಲಾಧಿಕಾರಿಗಳಿಗೆ ಕೋರಲಿದೆ ಎಂದು ಶಾಸಕ ದೊಡ್ಡಗೌಡರ ಹೇಳಿದರು. 

ಬೈಲಹೊಂಗಲ ಸಮಾಧಿ ಸ್ಥಳದಿಂದ ಹೊರಡುವ ವೀರಜ್ಯೋತಿ ಯಾತ್ರೆಯು ಬೆಂಗಳೂರಿನಲ್ಲಿ ಉದ್ಘಾಟನೆಗೊಂಡು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅ. 22 ರಂದು ಸಂಜೆ ಕಿತ್ತೂರಿಗೆ ಬರಲಿದೆ. ಅ. 23 ರಂದು ಮುಂಜಾನೆ ಪಟ್ಟಣದಲ್ಲಿ ಜ್ಯೋತಿ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡಗಳು ಭಾಗವಹಿಸಿ ಮೂರು ದಿನಗಳ ಅದ್ಧೂರಿ ಉತ್ಸವದ ಆಚರಣೆಗೆ ಮುನ್ನುಡಿ ಬರೆಯಲಿವೆ ಎಂದರು.  

ಸಹಾಯ ಕೇಂದ್ರ

ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲು ಜನತೆ ಹಾಗೂ ಉಪಸಮಿತಿ ಸದಸ್ಯರು ಅವಶ್ಯಕ ಸಲಹೆ, ಸೂಚನೆ ನೀಡಲು ಕಿತ್ತೂರು ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಹಾಯ ಕೇಂದ್ರ ತೆರೆಯಲಾಗುವುದು. ಸಾರ್ವಜನಿಕರು ನೀಡುವ ಸಲಹೆಗಳನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ತಿಳಿಸಿದರು.

ವಸ್ತು ಪ್ರದರ್ಶನ, ಕುಸ್ತಿ ಎಪಿಎಂಸಿಗೆ

ವಸ್ತು ಪ್ರದರ್ಶನ, ಮಾರಾಟ ಮಳಿಗೆ ಹಾಗೂ ಕುಸ್ತಿ ಪಂದ್ಯಾವಳಿಯನ್ನು ಎಪಿಎಂಸಿ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು. 

ಹರ್ ಘರ್ ನಂದಿಧ್ವಜ

ಉತ್ಸವದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಅಂದು ಪ್ರತಿ ಮನೆ ಮೇಲೆ ಜನರು ನಂದಿಧ್ವಜಾರೋಹಣ ಮಾಡಬೇಕು. ಧ್ವಜಗಳನ್ನು ಎಲ್ಲರಿಗೂ ಪೂರೈಸಲಾಗುವುದು. ವೀರಜ್ಯೋತಿ ಯಾತ್ರೆ ಬರುವ ಸಮಯದಲ್ಲಿ ತಳಿರು, ತೋರಣ ಕಟ್ಟಿ, ರಂಗೋಲಿ ಅರಳಿಸಿ ಸಂಭ್ರಮದಿಂದ ಅದನ್ನು ಸ್ವಾಗತಿಸಿ,  ಗೌರವ ಸಲ್ಲಿಸಬೇಕು

ಶಾಸಕ ಮಹಾಂತೇಶ ದೊಡ್ಡಗೌಡರ