‘ಕುಲವಳ್ಳಿ ರೈತರಿಗೆ ಸಾಗುವಳಿ ಹಕ್ಕು ನೀಡಿ'- Kittur


 ‘ಕುಲವಳ್ಳಿ ರೈತರಿಗೆ ಸಾಗುವಳಿ ಹಕ್ಕು ನೀಡಿ'

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಅಜ್ಜ, ಮುತ್ತಜ್ಜರ ಕಾಲದಿಂದ ಸಾಗುವಳಿ ಮಾಡುತ್ತ ಬಂದಿರುವ ತಾಲೂಕಿನ ಕುಲವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಒಂಬತ್ತು ಊರಿನ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡಬೇಕು ಎಂದು ರೈತಪರ ಹೋರಾಟಗಾರ ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ. ಎಚ್. ನೀರಲಕೇರಿ ಆಗ್ರಹಿಸಿದರು.

ಇಲ್ಲಿಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರೈತರ ಪ್ರತಿಭಟನೆ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು. 

2016-17ರಲ್ಲಿ ಸಿದ್ಧರಾಮಯ್ಯ ಸರ್ಕಾರವಿದ್ದಾಗ ಆಗಿನ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಹಾಗೂ ಅಧಿಕಾರಿಗಳು ಆಗಮಿಸಿ ಸಾಗುವಳಿ ಮಾಡುವ ರೈತರ ಸಮೀಕ್ಷೆ ನಡೆಸಿದರು.  ಇಲ್ಲಿ ಉಳುಮೆ ಮಾಡುತ್ತಿರುವ ರೈತರ ಪಟ್ಟಿ ಸಿದ್ಧಪಡಿಸಿದರು. ಅದಕ್ಕೆ ಅಧಿಕಾರಿಗಳು ಅನಧಿಕೃತ ಪಟ್ಟಿ ಎನ್ನುತ್ತಿರುವುದಕ್ಕೆ ನಾಚಿಕೆ ಆಗಬೇಕು ಎಂದು ಅವರು ತರಾಟೆಗೆ ತೆಗೆದುಕೊಂಡರು.

2016 ಎಕರೆ ಭೂಮಿಯನ್ನು 1464 ರೈತರು ಉಳುಮೆ ಮಾಡುತ್ತಿದ್ದಾರೆಂದು ಸರ್ಕಾರವೇ ಸಮೀಕ್ಷೆ ಮಾಡಿದೆ. ಅವರಿಗೆಲ್ಲ ಸರ್ಕಾರ ಬದುಕು ಕೊಡಬೇಕು. ಅವರನ್ನು ಒಕ್ಕಲೆಬ್ಬಿಸುವ ಕೆಲಸವಾಗಬಾರದು ಎಂದರು. 

ಉಳುಮೆ ಹಕ್ಕು ಪಡೆಯಲು ರೈತರು ಹೋರಾಟ ನಡೆಸಿದರೆ ಅವರ ಮೇಲೆ ಕೇಸ್ ಹಾಕಲಾಗುತ್ತಿದೆ. ರೈತರ ಹೋರಾಟದ ಹಕ್ಕಿಗೆ ಚ್ಯುತಿ ತರುವ ಕೆಲಸ ಅಧಿಕಾರಿಗಳಿಂದ ಆಗಬಾರದು. ಅವರ ಹೋರಾಟದ ಹಕ್ಕು ಕಸಿಯುವ ಪ್ರಯತ್ನ ನಡೆದರೆ ಸುಮ್ಮನೆ ಇರುವುದು ಸಾಧ್ಯವಿಲ್ಲ ಎಂದು ಗುಡುಗಿದರು.

ಕುಲವಳ್ಳಿ ಪಂಚಾಯ್ತಿ ಅಧ್ಯಕ್ಷ ಹಾಗೂ ರೈತ ಮುಖಂಡ ಬಿಷ್ಟಪ್ಪ ಶಿಂಧೆ ಮಾತನಾಡಿ, 1988ರಲ್ಲಿ ಅರಣ್ಯ ಇಲಾಖೆ ಹೆಸರಿನಲ್ಲಿದ್ದ ಒಡೆತನ ರದ್ದಾಗಿದೆ. 1974ರಲ್ಲಿ ಇನಾಂ ಭೂಮಿ ರದ್ದಾಗಿದೆ. ಈ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಪಾರ್ಮ್ ನಂ 7, 56 ಭರ್ತಿ ಮಾಡಿದ್ದಾರೆ. ಅವರಿಗೆ ಸಾಗುವಳಿ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.

ಸಾಗರ ಸೊಸೈಟಿ ಎಂಬ ನಕಲಿ ಹೆಸರಿನಲ್ಲಿ 1100 ಎಕರೆ ಭೂಮಿ ಇದೆ ಎಂದು ಹೇಳಲಾಗುತ್ತಿದೆ. ಅವರ ಜೊತೆ ಅಧಿಕಾರಿಗಳಾರು ಹೊಂದಾಣಿಕೆ ಆಗಿದ್ದೀರಿ ಎಂದು ಪ್ರಶ್ನಿಸಿದರು.

ಕಾಸೀಮ್ ನೇಸರಗಿ ಮಾತನಾಡಿ, ಅರಣ್ಯ ಭೂಮಿ ಸಾಗುವಳಿ ಮಾಡುವವರನ್ನು ಗುರುತಿಸುವುದಿಲ್ಲ. ಅಜ್ಜಂದಿರ ಕಾಲದಿಂದ ನಾವಿಲ್ಲಿ ಉಳುಮೆ ಮಾಡುತ್ತಿದ್ದೇವೆ. ಅನೇಕ ಹೋರಾಟ ಮತ್ತು ಪ್ರತಿಭಟನೆ ಮಾಡಿದರೂ ನಮಗೆ ಮುಕ್ತಿ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಅಖಂಡ ಕರ್ನಾಟಕ ರೈತ ಸಂಘಟನೆ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ ಮಾತನಾಡಿ, ರೈತರು ಜಾಗೃತರಾದರೆ ಸರ್ಕಾರ ಕಣ್ಣು ತೆರೆಯುತ್ತದೆ. ಜಮೀನಿನ ಹಕ್ಕು ಸಿಗುವವರೆಗೆ ಹೋರಾಟ ಮುಂದುವರೆಯಲಿದೆ. ಇದು ನಮ್ಮ ಬದುಕಿನ ಪ್ರಶ್ನೆ ಎಂದರು.

ಸಿದ್ದಣ್ಣ ಕಂಬಾರ ನಿರೂಪಿಸಿದರು. ಒಂಬತ್ತು ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು.


ಉಳುಮೆ ಮಾಡುತ್ತಿರುವ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ನಿಮಗೆ ಹಕ್ಕು ಕೊಡಿಸುತ್ತೇವೆ ಎಂದು ಅವರಿಂದ 10 ಸಾವಿರ ವರೆಗೂ ಹಣ ಪಡೆಯುತ್ತಿದ್ದಾರೆ. ಯಾರಿಗೂ ನಯಾಪೈಸೆ ಕೊಡಬೇಕಾಗಿಲ್ಲ

ಬಿಷ್ಟಪ್ಪ ಶಿಂಧೆ, ಹೋರಾಟಗಾರ

0/Post a Comment/Comments