ಸಂಗೊಳ್ಳಿ ರಾಯಣ್ಣನಿಗೆ ಅವಮಾನ: ಖಂಡನೆ - Kittur


 ಸಂಗೊಳ್ಳಿ ರಾಯಣ್ಣನಿಗೆ ಅವಮಾನ: ಖಂಡನೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿ ಅಳವಡಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ಲೆಕ್ಸ್ ಹರಿದು ಹಾಕಿ ಅವಮಾನ ಮಾಡಿರುವ ಕಿಡಿಗೇಡಿಗಳ ಮೇಲೆ ಪೊಲೀಸರು ತನಿಖೆ ನಡೆಸಿ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಆಗ್ರಹಿಸಿದೆ.

ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸನ್ನವರ   ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕನಿಗೆ ಅವಮಾನ ಮಾಡುವುದು ಸರಿಯಾದ ಕ್ರಮವಲ್ಲ. ಇಂಥ ದುಷ್ಟ ಪ್ರವೃತ್ತಿಯನ್ನು ಎಲ್ಲರೂ ಖಂಡಿಸಬೇಕು ಮತ್ತು ಉಗ್ರ ರೀತಿಯಾಗಿ ಹತ್ತಿಕ್ಕಬೇಕು ಎಂದು ಒತ್ತಿ ಹೇಳಿದರು.

ವರ್ತುಲದಲ್ಲಿ ನಾಯಕರ ಪ್ರತಿಮೆಗಳಿಗೆ, ಪ್ಲೆಕ್ಸ್‍ಗಳಿಗೆ ಅವಮಾನ ಮಾಡುವುದು ದುಷ್ಕರ್ಮಿಗಳ  ಕುಕೃತ್ಯವಾಗಿ ಮುಂದುವರೆದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೀವ ಬಲಿದಾನ ಮಾಡಿದ ವೀರರಿಗೆ ದುಷ್ಕರ್ಮಿಗಳು ಮಾಡಿದ ಅವಮಾನವು ಅವರ ಕೆಟ್ಟ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಇಂಥವರು ದೊಡ್ಡವರಿರಲಿ ಅಥವಾ ಅವರ ಬೆಂಬಲಕ್ಕೆ ನಿಂತವರು ಪ್ರಭಾವಿಗಳಿರಲಿ ಯಾವುದನ್ನೂ ಲೆಕ್ಕಿಸದೆ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಧಿಮಾಕಿನ ದುಷ್ಟರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಬಯಸಿದರು.

ಉಪಾಧ್ಯಕ್ಷ ಮಹೇಶ ಮಲಶೆಟ್ಟಿ ಮಾತನಾಡಿ, ಪದೆ, ಪದೇ ಇಂಥ ದುರ್ಘಟನೆಗಳು ನಡೆಯುತ್ತಿರುವುದರ ಹಿಂದೆ ಯಾವ ಪುರುಷಾರ್ಥವಿದೆ ಎಂದು ಪ್ರಶ್ನಿಸಿದ ಅವರು, ನಾಡ ರಕ್ಷಣೆಗಾಗಿ ಜೀವತೆತ್ತ ವೀರನಿಗೆ ಅವಮಾನ ಮಾಡುವುದು ಅಥವಾ ಅಂಥ ಯೋಚನೆ ಮಾಡುವುದು ನಾಡಿಗೆ ಬಗೆದ ದ್ರೋಹವಾಗಿದೆ. ಅವಮಾನ ಮಾಡಿದ ಕಿಡಿಗೇಡಿಗಳನ್ನು ಪೊಲೀಸರು ಶೀಘ್ರ ಬಂಧಿಸಿ ತಕ್ಕ ಪಾಠ ಕಲಿಸಲಿ ಎಂದು ಒತ್ತಾಯಿಸಿದರು.

0/Post a Comment/Comments