ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಬಚ್ಚನಕೇರಿ ಗ್ರಾಮದ ಬಳಿ ಶಾಸಕ ಮಹಾಂತೇಶ ದೊಡ್ಡಗೌಡರ ಜಮೀನು 25 ಎಕರೆ ಇರುವುದರಿಂದ ಕಿತ್ತೂರು ಅರಮನೆ ಮರು ನಿರ್ಮಾಣದ ಯೋಜನೆಯನ್ನು ಅಲ್ಲಿಗೆ ತೆಗೆದುಕೊಂಡು ಹೊರಟಿದ್ದಾರೆ ಎಂದು ಹೇಳಿಕೆ ನೀಡಿರುವ ವ್ಯಕ್ತಿ ಬಹಿರಂಗ ಕ್ಷಮೆಯಾಚಿಸಬೇಕು. ಇದಕ್ಕಾಗಿ 15 ದಿನಗಳ ಗಡುವು ವಿಧಿಸಿದ್ದೇವೆ ಎಂದು ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ತಿಳಿಸಿದರು.
ಸ್ಥಳೀಯ ಶಾಸಕರ ಗೃಹ ಕಚೇರಿಯಲ್ಲಿ ಬುಧವಾರ ಎರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಳ್ಳು ಆರೋಪ ಮಾಡಿ ಶಾಸಕರ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ್ದಾರೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವರಾಜ ಸಂಗೊಳ್ಳಿ ಅವರ ಹೆಸರು ಹೇಳದೆ ಪರೋಕ್ಷವಾಗಿ ಅವರ ವಿರುದ್ಧ ವ್ಯಂಗ್ಯ ಮಾತುಗಳ ವಾಗ್ಬಾಣ ನಡೆಸಿದರು.
ಅವರು ಹೇಳಿದಂತೆ ಶಾಸಕರು ಆ ಸ್ಥಳದಲ್ಲಿ 25 ಎಕರೆ ಜಮೀನು ಹೊಂದಿದ್ದರೆ ಅದನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಟ್ಟುಕೊಡಬೇಕು. ತಪ್ಪು ಹೇಳಿಕೆ ಕೊಟ್ಟು ದಿಕ್ಕು ತಪ್ಪಿಸಿದ್ದರೆ ಹೇಳಿದ ವ್ಯಕ್ತಿ ತಮ್ಮ ಜಮೀನು ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಬೇಕು ಎಂದು ಸವಾಲೆಸೆದರು.
ಕಿತ್ತೂರಲ್ಲಿಯೇ ಅರಮನೆ ಪುನರ್ ನಿರ್ಮಾಣವಾಗಬೇಕು ಎಂದು ನಡೆದ ಹೋರಾಟ ಪಕ್ಷಾತೀತವಾಗಿದೆ. ಪಕ್ಷದ ನಿಲುವೂ ಈಗಲೂ ಅದೇ ಆಗಿದೆ. ಆದರೆ, ಈ ರೀತಿ ಹೇಳಿಕೆ ನೀಡುವ ಮೂಲಕ ಈ ಹೋರಾಟವನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಿದಂತಾಗಿದೆ. ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸುಳ್ಳು ಆರೋಪ ಮಾಡಿದ ವ್ಯಕ್ತಿ ನಿಗದಿತ ಗಡುವಿನೊಳಗೆ ಬಹಿರಂಗ ಕ್ಷಮೆ ಕೇಳದಿದ್ದರೆ ಬಿಜೆಪಿಯ ಹಿರಿಯ ಮುಖಂಡರು, ಕಾರ್ಯಕರ್ತರು ಸೇರಿ ಮುಂದಿನ ಹೋರಾಟದ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆÉ ಎಂದು ಹೇಳಿದರು.
ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಪ್ರಾಧಿಕಾರ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡ್ಡಿ, ಮುಖಂಡರಾದ ಶ್ರೀಕರ ಕುಲಕರ್ಣಿ, ನಿಂಗನಗೌಡ ದೊಡ್ಡಗೌಡರ, ಜಗದೀಶ ವಸ್ತ್ರದ, ಸರಸ್ವತಿ ಹೈಬತ್ತಿ, ಬಸವರಾಜ ಕೊಳದೂರ, ಕಿರಣ ಪಾಟೀಲ, ಸಂಗಪ್ಪ ನರಗುಂದ, ಸುಭಾಸ ರಾವಳ, ರಾಜು ಕಲ್ಲವಡ್ಡರÀ ಇದ್ದರು.