ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಇಲ್ಲಿಯ ಗದ್ದಿಓಣಿಯ ವಿಠ್ಠಲ ದೇವಸ್ಥಾನದಲ್ಲಿ ರಾಗ ರಂಜಿನಿ ಸಂಗೀತ ಸಂಘ ಮತ್ತು ದೇವಸ್ಥಾನ ಸಮಿತಿಯವರು ಇತ್ತೀಚೆಗೆ ಆಯೋಜಿಸಿದ್ದ ಕಲಾವಿದ ರಜತ ಕುಲಕರ್ಣಿ ಅವರ ಶಾಸ್ತ್ರೀಯ ಸಂಗೀತ ಗಾಯನಕ್ಕೆ ಶ್ರೋತೃಗಳು ತಲೆದೂಗಿದರು. ಲಯಬದ್ಧ ರಾಗದ ಗಾಯನಕ್ಕೆ ಚಪ್ಪಾಳೆಯನ್ನೂ ತಟ್ಟಿ ಖುಷಿಪಟ್ಟರು.
ಮಾರು ಬಿಹಾಗ ರಾಗದೊಂದಿಗೆ ಶಾಸ್ತ್ರೀಯ ಗಾಯನವನ್ನು ಆರಂಭಿಸಿದ ರಜತ ಸುಮಾರು 30ನಿಮಿಷ ಪ್ರಸ್ತುತ ಪಡಿಸಿದರು. ಅನಂತರ 'ತುಂಗಾ ತೀರದಿ, ನೀನೇ ಅನಾಥ ಬಂಧು' ದಾಸರ ಪದಗಳು ಹಾಗೂ 'ಸಾವಳಿ ಸುಂದರ, ಭವ ಯತಿ ವರದೇಂದ್ರ' ಮರಾಠಿ ಭಜನ್ ಹಾಡುಗಾರಿಕೆ ಕೇಳುಗರಿಗೆ ಮುದ ನೀಡಿತು. ಭೈರವಿ ರಾಗದಲ್ಲಿ ಹಾಡಿದ 'ಕಾಯೋ ಕರುಣಾನಿಧಿ' ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಬೆಳಗಾವಿಯ ನಾರಾಯಣ ಗಣಾಚಾರಿ ತಬಲಾ, ಶಿರಸಿಯ ಭರತ ಹೆಗಡೆ ಹಾರ್ಮೋನಿಯಂ ಮತ್ತು ರಜನಿ ಕುಲಕರ್ಣಿ ತಂಬೂರಿ ಸಾಥ್ ನೀಡಿದರು.
ಶ್ರೀಮಠದ ಸಮಿತಿಯ ಗುಂಡಣ್ಣ ನಾಯ್ಕ್, ವಿಠ್ಠಲರಾವ್ ಪಾಗಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಗೀತ ಸಂಘದ ಅಧ್ಯಕ್ಷ ಪ್ರಲ್ಹಾದ್ ಶಿಗ್ಗಾವಿ ಸ್ವಾಗತಿಸಿದರು. ಸದಸ್ಯ ಈಶ್ವರ ಗಡಿಬಿಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಸಂತ ಭಜಂತ್ರಿ ವಂದಿಸಿದರು. ಸಂದೀಪ ದೇಶಪಾಂಡೆ, ರಾಜೇಂದ್ರ ಕುಲಕರ್ಣಿ, ಸುನಂದಾ ಜೋಶಿ, ಅಶೋಕ ಪತಂಗೆ, ರುದ್ರಪ್ಪ ಎಲಿಗಾರ, ರಾಚೋಟಿಮಠ, ಸಂಗೀತಾಭಿಮಾನಿಗಳು, ಆರಾಧನಾ ಮಹೋತ್ಸವ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
Post a Comment