ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಅ. 23 ರಿಂದ ಮೂರು ದಿನಗಳ ಕಾಲ ಆಚರಿಸಲಾಗುವ ಐತಿಹಾಸಿಕ ರಾಣಿ ಚನ್ನಮ್ಮನ ಕಿತ್ತೂರು ಉತ್ಸವ ಇನ್ಮುಂದೆ ರಾಜ್ಯಮಟ್ಟದ ಉತ್ಸವವಾಗಿ ಬದಲಾವಣೆ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.
ಸೋಮವಾರ ಪತ್ರಕರ್ತರ ಜೊತೆಗೆ ಅವರು ಮಾತನಾಡಿ, ಉತ್ಸವ ಆಚರಣೆಯ ರೂಪು ರೇಷೆ ಸಿದ್ಧಪಡಿಸಿಕೊಂಡು ಬರಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ. ರಾಜ್ಯಮಟ್ಟದ ಉತ್ಸವವಾಗಿ ಇದೇ ವರ್ಷ ಸರ್ಕಾರ ಘೋಷಣೆ ಮಾಡಿದರೆ ರೂ. 5 ಕೋಟಿ ವೆಚ್ಚದಲ್ಲಿ ಉತ್ಸವ ಆಚರಣೆ ಆಗಲಿದೆ. 5ದಿನ ಉತ್ಸವ ಆಚರಿಸುವ ವಿಚಾರವೂ ಚರ್ಚೆಯಲ್ಲಿದೆ ಎಂದರು.
ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ಸಮಾಧಿ ಸ್ಥಳದಿಂದ ಹೊರಡಿಸಲಾಗುವ ವೀರಜ್ಯೋತಿ ರಾಜ್ಯದ ಎಲ್ಲ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಸಂಚರಿಸಲಿದೆ. ಇದರಿಂದಾಗಿ ಉತ್ಸವಕ್ಕೆ ಹೆಚ್ಚು ಪ್ರಚಾರ ಸಿಗಲಿದೆ. ವೀರರಾಣಿ ಚನ್ನಮ್ಮನ ತ್ಯಾಗ ಮತ್ತು ಬಲಿದಾನದ ಚರಿತ್ರೆಯ ಪ್ರಸಾರವೂ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಮಟ್ಟದ ಉತ್ಸವವಾಗಿ ನಿರ್ಣಯ ಕೈಗೊಳ್ಳುವ ಗಂಭೀರ ಚರ್ಚೆಯಲ್ಲಿ ರಾಜ್ಯ ಸರ್ಕಾರ ತೊಡಗಿಕೊಂಡಿದೆ. ಅದಕ್ಕಾಗಿ ಶೀಘ್ರ ಸಭೆ ನಡೆಸುವ ಚಿಂತನೆಯೂ ಇದೆ. ಕಿತ್ತೂರಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯ ಬದಿಗೊತ್ತಿ ಕಳೆದ ಬಾರಿಯ ಉತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಈ ವಿಚಾರವನ್ನು ಅಂದು ಮಂಡಿಸಿದ್ದರು. ಅದು ಈಗ ಅನುಷ್ಠಾನಗೊಳ್ಳುವ ಹಂತದಲ್ಲಿದೆ. ಅದಕ್ಕಾಗಿ ಸರ್ಕಾರವನ್ನು ಜನರು ಅಭಿನಂದಿಸುತ್ತಾರೆ ಎಂದರು.