ಕುಲವಳ್ಳಿ ಗುಡ್ಡದಲ್ಲಿ ಅಪರಿಚಿತ ತಂಡದ ಓಡಾಟ : ನಿಧಿ ಶೋಧಕ್ಕೊ.. ಜಮೀನು ಮಾರಾಟಕ್ಕೊ..? - Kittur


 ನಿಧಿ ಶೋಧಕ್ಕೊ.. ಜಮೀನು ಮಾರಾಟಕ್ಕೊ..?

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕುಲವಳ್ಳಿ ಗ್ರಾಮ ಪಂಚಾಯ್ತಿ ಊರುಗಳಲ್ಲಿ ಏಳು ಜನರಿದ್ದ ಅಪರಿಚಿತರ ತಂಡ ಮಂಗಳವಾರ ಓಡಾಟ ನಡೆಸಿದ್ದು, ನಿಧಿ ಶೋಧಕ್ಕೊ ಅಥವಾ ಅಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಿ ಜಮೀನು ಮಾರಾಟ ಮಾಡಲಿಕ್ಕೊ ಎಂಬ ಸಂದೇಹ ಸಾಗರ ಹಾಗೂ ಸುತ್ತಲಿನ ರೈತರನ್ನು ತೀವ್ರವಾಗಿ ಕಾಡುತ್ತಿದೆ.

ಅಪರಿಚಿತರು ಓಡಾಡುತ್ತಿರುವುದನ್ನು ಗಮನಿಸಿದ ಸಾಗರದ ಗ್ರಾಮಸ್ಥರು ಊರಿನ ಗುಡಿಯಲ್ಲಿ ದಿಗ್ಬಂಧನ ಹಾಕಿದರು. ಯುವಕರು ವಿಚಾರಿಸಿದಾಗ ಒಂದೊಂದು ರೀತಿ ಹೇಳಿಕೆ ನೀಡಲು ಪ್ರಾರಂಭಿಸಿದರು. 'ಹೊಲ ನೋಡಲು ಬಂದಿರುವುದಾಗಿ ತಿಳಿಸಿದರು. ನಮ್ಮನ್ನು ಬೇರೊಬ್ಬರು ಇಲ್ಲಿಗೆ ಕಳುಹಿಸಿದ್ದಾರೆ' ಎಂದರು. ಅವರು ಯಾರೆಂದು ಪ್ರಶ್ನಿಸಿದರೆ ಉತ್ತರಿಸುವ ಗೋಜಿಗೂ ಹೋಗಲಿಲ್ಲ. 

ಅವರ ಜವಾಬ್ದಾರಿ ಇಲ್ಲದ ಹೇಳಿಕೆಗಳಿಂದಾಗಿ ಕುಲವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿಷ್ಟಪ್ಪ ಶಿಂಧೆ ಗರಂ ಆದರು. 'ನೀವು ಯಾರು, ಇಲ್ಲಿಗೆ ಏಕೆ ಬಂದಿದ್ದೀರಿ, ನಿಮ್ಮನ್ನಾರು ಕಳಿಸಿದ್ದಾರೆ, ಅವರ ಹೆಸರನ್ನು ಹೇಳಿದರೆ ಮಾತ್ರ ನಿಮ್ಮನ್ನು ಇಲ್ಲಿಂದ ಬಿಡುಗಡೆ ಮಾಡಲಾಗುವುದು' ಎಂದು ಎಚ್ಚರಿಸಿದರು.

ಏಳು ಜನರ ತಂಡದಲ್ಲಿದ್ದ ಒಬ್ಬ 'ನಮ್ಮನ್ನ ಖಾನಾಪುರ ತಾಲೂಕಿನ ಕರಂಬಳದ ಈ ವ್ಯಕ್ತಿ ಜಮೀನು ಕೊಡುವುದಿದೆ ಎಂದು ಕರೆಸಿದ್ದಾರೆ' ಎಂದರು. ಕರಂಬಳದ ವ್ಯಕ್ತಿ ಕೇಳಿದರೆ 'ನನಗೆ ಮತ್ತೊಬ್ಬರು ಇಲ್ಲಿಗೆ ಕಳುಹಿಸಿದ್ದಾರೆ' ಎಂದರು. ಯಾರು ಎಂದು ಕೇಳಿದರೆ, ಹೆಸರು ಹೇಳಲು ಹೋಗಲಿಲ್ಲ. ಏರುಧ್ವನಿಯಲ್ಲಿ ಪ್ರಶ್ನಿಸಿದಾಗ ಅವರ ಮೊಬೈಲ್ ನಂಬರ್ ಕೊಟ್ಟರು. ಅದಕ್ಕೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು.

ಈ ಹಿಂದೆಯೂ ವಾಹನ ತೆಗೆದುಕೊಂಡು ಇವರು ಬಂದು ಹೋಗಿದ್ದಾರೆ. ಬಹಳ ದಿನಗಳ ಹಿಂದೆಯೇ ಇಲ್ಲಿ ಭೂಮಿ ಮಾರಾಟ ಮಾಡುವುದು ಇಲ್ಲ ಎಂದು ಹೇಳಿ ಕಳಿಸಲಾಗಿತ್ತು. ಈ ರೀತಿ ಹೇಳಿದರೂ ಮತ್ತೆ ಇಲ್ಲಿಗೆ ಬಂದಿದ್ದಾರೆ. ಖರೇ ಹೇಳ್ರಿ ಯಾತಕ್ಕೆ ಬಂದಿದ್ದೀರಿ ಎಂದು  ಪುನಃ ಏರುಧ್ವನಿಯಲ್ಲಿ ಬಿಷ್ಟಪ್ಪ ತರಾಟೆಗೆ ತೆಗೆದುಕೊಂಡರು. ನಿಮ್ಮನ್ನು ಇಲ್ಲಿಗೆ ಕಳುಹಿಸಿದ ವ್ಯಕ್ತಿ ಬರುವವರೆಗೆ ನಿಮ್ಮನ್ನು ಬಿಟ್ಟು ಕಳಿಸುವುದಿಲ್ಲ ಎಂದು ಗ್ರಾಮಸ್ಥರು ಹಟ ಹಿಡಿದರು.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು. ಠಾಣೆಗೆ ಕರೆದು ವಿಚಾರಣೆ ಮಾಡಿದರು. 'ನಿಮ್ಮನ್ನು ಇಲ್ಲಿಗೆ ಕಳಿಸಿದವರನ್ನು ಗುರುವಾರ ಠಾಣೆಗೆ ಕರೆದುಕೊಂಡು ಬರಬೇಕು' ಎಂದು ಪೊಲೀಸರು ತಾಕೀತು ಮಾಡಿ ಕಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಸವರಾಜ ಹೈಬತ್ತಿ, ಸರಸ್ವತಿ ಹೈಬತ್ತಿ, ರಮೇಶ ನರೇಗಲ್ಲ, ದಶರಥ ಮಡಿವಾಳರ, ಗ್ರಾಮಸ್ಥರು ಇದ್ದರು.

0/Post a Comment/Comments