ಅರಮನೆ ಪುನರ್ ನಿರ್ಮಾಣ : ಬಂದ್ ಯಶಸ್ವಿ - Kittur


 ಆ. 2 ರಂದು ಕರೆನೀಡಿದ್ದ ಬಂದ್ ಯಶಸ್ವಿ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕಿತ್ತೂರಿಂದ ನಾಲ್ಕು ಕಿ. ಮೀ  ಅಂತರದಲ್ಲಿರುವ ಬಚ್ಚನಕೇರಿಯ   ಸರ್ಕಾರಿ ಗೋಮಾಳದಲ್ಲಿ ಐತಿಹಾಸಿಕ ಕಿತ್ತೂರು ಅರಮನೆಯ ಮರು ನಿರ್ಮಾಣ  ಮಾಡುವುದು ಬೇಡ. ಈಗಿರುವ ಕೋಟೆ ಅವಶೇಷದ ಸಮೀಪದಲ್ಲಿಯೇ ಪರ್ಯಾಯ   ಅರಮನೆ ಅನುಷ್ಠಾನಗೊಳ್ಳಬೇಕು ಎಂದು ಪ್ರತಿಭಟನೆಕಾರರು  ಸರ್ಕಾರವನ್ನು ಆಗ್ರಹಿಸಿದರು.

ಸ್ಥಳಾಂತರ ವಿರೋಧಿಸಿ ಮಂಗಳವಾರ ನಡೆದ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ  ಸ್ವಾಮೀಜಿ, ಈಗಿರುವ  ಕೋಟೆ  ಬಳಿ ನಿರ್ಮಾಣಗೊಂಡರೆ ಅದಕ್ಕೆ ಹೆಚ್ಚು ಮಹತ್ವ ಸಿಗಲಿದೆ ಎಂದು ಒತ್ತಿ  ಹೇಳಿದರು.


ಬಂದ್ ಯಶಸ್ವಿ

ಅರಮನೆ ಪುನರ್ ನಿರ್ಮಾಣದ ಸ್ಥಳಾಂತರ ವಿರೋಧಿಸಿ ಕರೆ ನೀಡಲಾಗಿದ್ದ ಆ. 2 ರ ಬಂದ್ ಪಟ್ಟಣದಲ್ಲಿ ಯಶಸ್ವಿಯಾಯಿತು. ಇಲ್ಲಿಯ ಹೋಟೆಲ್, ಅಂಗಡಿ, ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್‍ಗೆ ಬೆಂಬಲ ನೀಡಿದರು. ಆದರೆ ಬಸ್ ಸಂಚಾರ, ಸಿನಿಮಾ ಮಂದಿರಕ್ಕೆ ಯಾವುದೇ ಅಡಚಣಿ ಆಗಲಿಲ್ಲ. 

ಮಂಗಳವಾರ ಬಂದ್ ಕರೆ ನೀಡಿದ್ದ ವಿಷಯನ್ನು ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲಾಗಿತ್ತು. ಹೀಗಾಗಿ ಪಟ್ಟಣ ಪಂಚಾಯ್ತಿ ಮುಂದೆ ಹೆಚ್ಚಿನ ನಾಗರಿಕರು ವಾಹನಗಳೊಂದಿಗೆ ಬೆಳಿಗ್ಗೆಯಿಂದಲೇ ಜಮಾಯಿಸಲು ಪ್ರಾರಂಭಿಸಿದ್ದರು. 

ಆಟೋರಿಕ್ಷಾ, ಕಾರ್, ಕ್ರೂಸರ್ ಸಮೇತ ಪಟ್ಟಣದಲ್ಲಿ  ಮೆರವಣಿಗೆ ಹೊರಡಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕ ಸೇರಿದ ಎಲ್ಲರೂ ಅಲ್ಲಿ ಸಭೆ ನಡೆಸಿ ಬೆಳಗಾವಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ತೆರಳಿದರು.

ಮುಖಂಡರಾದ ಬಾಬಾಸಾಹೇಬ ಪಾಟೀಲ, ಹಬೀಬ ಶಿಲೆದಾರ್, ಅನಿಲ ಎಮ್ಮಿ, ಬಸವರಾಜ ಸಂಗೊಳ್ಳಿ, ಸಿದ್ದು ಮಾರಿಹಾಳ, ಸಚಿನ್ ಮಾರಿಹಾಳ, ಎಂ. ಎಫ್. ಜಕಾತಿ, ಬಿಷ್ಟಪ್ಪ ಶಿಂಧೆ, ಪುಂಡಲೀಕ ನೀರಲಕಟ್ಟಿ, ಹನೀಫ್ ಸುತಗಟ್ಟಿ, ಯಲ್ಲಪ್ಪ ಒಕ್ಕುಂದ, ನಿಂಗಪ್ಪ ತಡಕೋಡ, ಚಂದ್ರಗೌಡ ಪಾಟೀಲ, ಕೃಷ್ಣಾ  ಬಾಳೇಕುಂದರಗಿ, ವಿಜಯಕುಮಾರ್ ಶಿಂಧೆ, ಮಹಾಂತೇಶ ಕಂಬಾರ, ಅಪ್ಪೇಶ ದಳವಾಯಿ, ಸುನೀಲ ಘೀವಾರಿ, ಆನಂದ ಕತ್ತಿಶೆಟ್ಟಿ, ಅಶೋಕ ಮಾಳಗಿ, ರವಿ ಜಾಲಿಕಟ್ಟಿ, ಕಿರಣ ವಾಳದ, ಯಲ್ಲಪ್ಪ ಕಡಕೋಳ,  ನೂರಾರು  ನಾಗರಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

0/Post a Comment/Comments