ಅಮೃತ ಮಹೋತ್ಸವ: ಬೃಹತ್ ತಿರಂಗಾ ರ್ಯಾಲಿ - Kiitur


 ಅಮೃತ ಮಹೋತ್ಸವ: ಬೃಹತ್ ತಿರಂಗಾ ರ್ಯಾಲಿ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ರಾಷ್ಟ್ರಧ್ವಜ ಹಿಡಿದ ಮಹಿಳೆಯರ ಮೈಲುದ್ದದ ಸಾಲು, ಅವರ ಜೊತೆಗೆ ಹೆಜ್ಜೆ ಹಾಕಿದ ಶಾಸಕರು, ಅಧಿಕಾರಿಗಳು, ಕಾರ್ಯಕರ್ತರು. ಸಾರ್ವಜನಿಕರಲ್ಲಿ ಅಭಿಮಾನ ಉಕ್ಕಿಸಿದ  ಜಾಥಾ..

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಶನಿವಾರ ಪಟ್ಟಣದಲ್ಲಿ ನಡೆದ ತಿರಂಗಾ ರ್ಯಾಲಿಯ ಮುಖ್ಯಾಂಶಗಳಿವು.

ರಾಣಿ ಚನ್ನಮ್ಮನ ವರ್ತುಲದಲ್ಲಿ ಮುಂಜಾನೆ ಅಧಿಕ ಸಂಖ್ಯೆಯ ಮಹಿಳೆಯರು ಸೇರಿದ್ದರು. ಕೋಲಿಗೆ ಸಿಕ್ಕಿಸಿಕೊಂಡ ಹಿಡಿದಿದ್ದ ರಾಷ್ಟ್ರಧ್ವಜ ದೇಶದ ಮೇಲಿನ ಅಭಿಮಾನವನ್ನು ನೂರ್ಮಡಿಗೊಳಿಸಿತ್ತು. ಶಾಸಕ ಮಹಾಂತೇಶ ದೊಡ್ಡಗೌಡರ ದಂಪತಿ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ನೆರೆದಿದ್ದವರ ಹುಮ್ಮಸ್ಸು ಇಮ್ಮಡಿಗೊಳಿಸಿತ್ತು. 

ಧ್ವಜ ರ್ಯಾಲಿಗೆ ಚಾಲನೆ ನೀಡುವ ಮುನ್ನ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ,  ದೇಶ ಸ್ವಾತಂತ್ರ್ಯ ಪಡೆಯಲು ನಡೆದ ಅಪ್ರತಿಮ ಹೋರಾಟದ ಕತೆ ಕೇಳಿದರೆ ರೋಮಾಂಚನ ಆಗುತ್ತದೆ. ಇದರಿಂದ ಜನರಿಗೂ ಸ್ಪೂರ್ತಿ ಸಿಗುತ್ತದೆ ಎಂದು ನುಡಿದರು.

ಅಂದಿನ  ಸೇನಾನಿಗಳ ತ್ಯಾಗ ಮತ್ತು ಬಲಿದಾನದಿಂದ ದೇಶ ಸ್ವಾತಂತ್ರ್ಯ ಗಳಿಸಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ಎಲ್ಲರಿಗಿಂತ ಯುವ ಪೀಳಿಗೆ ಮೇಲೆ ಹೆಚ್ಚಾಗಿದೆ ಎಂದರು. 

75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ದೇಶಾದ್ಯಂತ 75 ಐತಿಹಾಸಿಕ ತಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಗುರುತಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದರಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಪಟ್ಟಣ ಸೇರಿದೆ. ಇದು ಎಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದರು. 

ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಮಹಾಂತೇಶ ಹೊಸಪೇಟಿ, ಶಾಸಕರ ಪತ್ನಿ ಮಂಜುಳಾ ದೊಡ್ಡಗೌಡರ,  ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಉಳವಪ್ಪ ಉಳ್ಳಾಗಡ್ಡಿ, ಮುಖಂಡರಾದ ಬಸವರಾಜ ಪುಟ್ಟಿ, ಉಮಾದೇವಿ ಬಿಕ್ಕಣ್ಣವರ, ಬಸವರಾಜ ಕೊಳದೂರ, ಸರಸ್ವತಿ ಹೈಬತ್ತಿ, ಮಹಾದೇವ ಹತ್ತಿ,  ಸಂಗಪ್ಪ ನರಗುಂದ, ಶಿವಾನಂದ ಹನಮಸಾಗರ,  ಸುವರ್ಣ ಹಣಜಿ, ಪಪಂ ಸದಸ್ಯರು, ಕಾರ್ಯಕರ್ತರು ಇದ್ದರು.

ಗಮನ ಸೆಳೆದ ಬೈಕ್ ರ್ಯಾಲಿ

 ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಶುಕ್ರವಾರ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಸಂಪಗಾಂವದಿಂದ ಕಿತ್ತೂರು ವರೆಗೆ ಬೃಹತ್ ಬೈಕ್ ರ್ಯಾಲಿ ನಡೆಯಿತು. 

ವಾಹನಕ್ಕೆ ಕಟ್ಟಿದ ರಾಷ್ಟ್ರಧ್ವಜ, ಹಿಂದೆ ಕುಳಿತ ಸವಾರ ಎತ್ತರಕ್ಕೆ ಪ್ರದರ್ಶಿಸಿದ ಧ್ವಜ ನೋಡುಗರಲ್ಲಿ ಪುಳಕವನ್ನುಂಟು ಮಾಡಿತು. ಕಿತ್ತೂರಿನ ಚನ್ನಮ್ಮ ವರ್ತುಲಕ್ಕೆ ಆಗಮಿಸಿದ ಬೈಕ್ ಸವಾರರಿಗೆ ಜೆಸಿಬಿ ಯಂತ್ರ ಮೂಲಕ ಹೂವಿನ ಮಳೆಗರೆಯಲಾಯಿತು. 

ರಾಷ್ಟ್ರೀಯ ಮಹಿಳಾ ಯುವ ಮೋರ್ಚಾ ಉಪಾಧ್ಯಕ್ಷೆ ಬಿ. ಅರ್ಪಿತಾ, ಮಂಡಲ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಪ್ರಾಧಿಕಾರ ಸದಸ್ಯ ಉಳವಪ್ಪ ಉಳ್ಳಾಗಡ್ಡಿ, ಮಹಾದೇವ ಹತ್ತಿ, ಜಿಲ್ಲಾ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಈರಣ್ಣಾ ಬಡಿಗೇರ, ವಿನೋದಕುಮಾರ, ಶ್ರೀಕರ ಕುಲಕರ್ಣೀ, ನಾಗರಾಜ ಅಸುಂಡಿ, ಬಸನಗೌಡ ಸಿದ್ರಾಮನಿ, ಬಸವರಾಜ ನೇಸರಗಿ, ಶಿವಾನಂದ ಹನಮಸಾಗರ, ರಮೇಶ ಉಗರಖೋಡ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸರಸ್ವತಿ ಹೈಬತ್ತಿ, ಮಹಿಳಾ ಮಂಡಲ ಅಧ್ಯಕ್ಷೆ ಉಮಾದೇವಿ ಬಿಕ್ಕಣ್ಣವರ, ಸುವರ್ಣಾ ಹಣಜಿ, ಪಪಂ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. 

0/Post a Comment/Comments