ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಈಗಿರುವ ರಾಣಿ ಚನ್ನಮ್ಮನ ಭಗ್ನ ಕೋಟೆ ಸಮೀಪದಲ್ಲೇ ಅರಮನೆ ಪ್ರತಿರೂಪ ನಿರ್ಮಾಣಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಸಾರ್ವಜನಿಕರ ಇಚ್ಛೆಯಂತೆ ಇದರ ಸಮೀಪದಲ್ಲೇ ನಿರ್ಮಾಣವಾಗಲಿ ಎಂಬ ಆಸೆಯೂ ನನ್ನದಾಗಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಅಭಿಪ್ರಾಯಪಟ್ಟರು.
ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಸೋಮವಾರ ಕರೆಯಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಅರಮನೆ ನಿರ್ಮಾಣದ ವಿಷಯವನ್ನು ಸಾರ್ವಜನಿಕರೊಂದಿಗೆ ಚರ್ಚಿಸಲು ಗ್ರಾಮದೇವಿ ದೇವಸ್ಥಾನದಲ್ಲಿ ಸಭೆ ಕರೆಯಲಾಗಿತ್ತು. ಅಲ್ಲಿ ಈ ಸಂಗತಿಗೆ ಹೆಚ್ಚು ಮಹತ್ವ ನೀಡಲಾಗಿತ್ತು ಎಂದು ಸ್ಮರಿಸಿಕೊಂಡರು.
ಅಂದು ನಡೆದ ಸಭೆಯಲ್ಲಿ, ಕೋಟೆ ಸಮೀಪದಲ್ಲಿರುವ ಜಮೀನುಗಳ ಮಾಲೀಕರು ಭಾಗವಹಿಸಿದ್ದರು. ನಮಗೆ ಭೂಮಿ ಇರುವುದು ಇಲ್ಲಿ ಮಾತ್ರ. ಅದಕ್ಕಾಗಿ ಹೆಚ್ಚು ಹಣ ನೀಡಬೇಕು ಎಂದು ಮನದಾಸೆ ವ್ಯಕ್ತಪಡಿಸಿದ್ದರು. ಇದು ಸ್ವಾಭಾವಿಕವೂ ಆಗಿತ್ತು. ಈ ಸಭೆಯ ಬಳಿಕ ನಡೆದ ಮಾತುಕತೆಯಲ್ಲಿಯೂ ಧಾರಣಿ ಬಗ್ಗೆ ಚರ್ಚೆ ನಡೆಯಿತು. ಆದರೆ ತೀರ್ಮಾನಕ್ಕೆ ಬರಲಾಗಲಿಲ್ಲ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅರಮನೆ ಕನಸು ಬಿತ್ತಿದ್ದಾರೆ. ಕಿತ್ತೂರಿಗೆ ಏನಾದರೂ ಮಾಡಬೇಕೆಂಬ ಕಳಕಳಿ ಮತ್ತು ಪ್ರೀತಿ ಅವರಲ್ಲಿದೆ. ಹೀಗಾಗಿ ನಾಗರಿಕರ ನಿಯೋಗವನ್ನು ಅವರ ಬಳಿ ಕರೆದುಕೊಂಡು ಹೋಗಲಾಗುವುದು. ಭೂ ಮಾಲೀಕರಿಗೆ ಹೆಚ್ಚು ಪರಿಹಾರ ನೀಡುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಗುಂಟೆ ಭೂಮಿಯಿಲ್ಲ
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ವಂತ ಗುಂಟೆ ಜಮೀನೂ ಇಲ್ಲ. ಅದಕ್ಕೆ ನಿವೇಶನ ಇರಲಿ ಎಂದು ಬಚ್ಚನಕೇರಿ ಬಳಿ ಭೂಮಿ ಕೇಳಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.
ಅರಮನೆ ಪುನರ್ ನಿರ್ಮಾಣ ಮಾಡಬೇಕು. ಪ್ರವಾಸೋದ್ಯಮ ಕೇಂದ್ರವನ್ನಾಗಿ ಕಿತ್ತೂರು ಅಭಿವೃದ್ಧಿ ಪಡಿಸಬೇಕೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ ಆಗಿದೆ. ಇದನ್ನು ರಾಜಕಾರಣಕ್ಕಾಗಿ ನಾನೇನೂ ಉಪಯೋಗ ಮಾಡಿಕೊಳ್ಳುತ್ತಿಲ್ಲ. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
26 ಎಕರೆ
ಕಿತ್ತೂರು ಅರಮನೆ ಮಾದರಿ ನಿರ್ಮಾಣ ಮತ್ತು ಅದರ ಸುತ್ತಲೂ ಸೌಂದರ್ಯೀಕರಣಕ್ಕೆ ಅಂದಾಜು 26 ಎಕರೆ ಭೂಮಿ ಬೇಕಾಗಿದೆ. ಇವೆಲ್ಲ ಕಾಮಗಾರಿ ನೆರವೇರಿಸಲು ರೂ. 113 ಕೋಟಿ ಅಂದಾಜು ವೆಚ್ಚ ತಗುಲಲಿದೆ ಎಂದು ಹೇಳಿದರು.
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡ್ಡಿ, ಬಿಜೆಪಿ ಮಂಡಳ ಅಧಕ್ಷ ಡಾ. ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಮೌಳೇಶ ದಳವಾಯಿ, ಜಗದೀಶ ವಸ್ತ್ರದ, ನಿಜಲಿಂಗಯ್ಯ ಹಿರೇಮಠ, ಜಗದೀಶ ಬಿಕ್ಕಣ್ಣವರ, ಎಸ್. ಆರ್. ಪಾಟೀಲ, ಗಂಗಣ್ಣ ಕರಿಕಟ್ಟಿ, ಮಹಾದೇವ ರಾವಳ, ಜಯಂತ ಮಾಳೋದೆ, ಕಿರಣ ಪಾಟೀಲ, ನಾಗರಾಜ ಅಸುಂಡಿ, ದೌಲತ್ ಪರಂಡೇಕರ, ಸಂಗಪ್ಪ ನರಗುಂದ, ಪಟ್ಟಣ ಪಂಚಾಯ್ತಿ ಸದಸ್ಯರು, ನಾಗರಿಕರು ಉಪಸ್ಥಿತರಿದ್ದರು.
ಶಾಂತರೀತಿ ಬಂದ್ ಆಚರಿಸಿ
ಚನ್ನಮ್ಮನ ಕಿತ್ತೂರು: ಆ. 2 ರಂದು ನಡೆಸಲಿರುವ ಕಿತ್ತೂರು ಬಂದ್ ಶಾಂತರೀತಿ ಆಗಿರಲಿ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿ ಬಳಿ ಮನವಿ ಸಲ್ಲಿಸುವುದರಿಂದ ನನಗೂ ಹೆಚ್ಚು ಬಲ ಸಿಕ್ಕಂತಾಗುತ್ತದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಬಂದ್ ಬಗ್ಗೆ ಪ್ರತಿಕ್ರಿಯಿಸಿದರು.
ಕಿತ್ತೂರು ಕೋಟೆ ಸಮೀಪದಲ್ಲೇ ಅರಮನೆ ಮಾದರಿ ನಿರ್ಮಾಣವಾಗಬೇಕು ಎಂಬ ಇಲ್ಲಿಯ ಜನರ ಭಾವನೆಗಳನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲು ನನಗೆ ಹೆಚ್ಚು ಅನಕೂಲವಾಗುವುದು ಎಂದೂ ಹೇಳಿದರು.