5 ಕೋಟಿ ಅನುದಾನ; 5 ದಿನ ಕಿತ್ತೂರು ಉತ್ಸವ' - Kittur


 5 ಕೋಟಿ ಅನುದಾನ; 5 ದಿನ ಕಿತ್ತೂರು ಉತ್ಸವ'

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ರಾಜ್ಯಮಟ್ಟದ ಉತ್ಸವವಾಗಿ ರೂಪಾಂತರಗೊಳ್ಳುತ್ತಿರುವ ರಾಣಿ ಚನ್ನಮ್ಮನ ಕಿತ್ತೂರು ಉತ್ಸವವು 5ದಿನಗಳ ಕಾಲ ನಡೆಯಬೇಕು ಮತ್ತು ಆಚರಣೆಗೆ ರೂ. 5 ಕೋಟಿ ಅನುದಾನವನ್ನು ಸರ್ಕಾರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಇಲ್ಲಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಗಣ್ಯರು ಈ ಅಭಿಪ್ರಾಯ ಮಂಡಿಸಿದರು.

ಉತ್ಸವದ ಯಶಸ್ಸಿಗೆ ಉಪಸಮಿತಿ ನೇಮಕ ಮಾಡಬೇಕು. 10ದಿನಕ್ಕೊಮ್ಮೆ ಸಭೆ ಸೇರಿ ಚರ್ಚೆ ನಡೆಸಬೇಕು. ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಆಮಂತ್ರಿಸಬೇಕು. ಕಿತ್ತೂರು ಸಂಸ್ಥಾನದ ಎಲ್ಲ ವೀರರ ಸ್ಮರಿಸುವ ಕೆಲಸವಾಗಬೇಕು. ಸಿಎಂ ನೇತೃತ್ವದಲ್ಲಿ ಕಿತ್ತೂರು ಉತ್ಸವದ ಸಭೆಯನ್ನೊಮ್ಮೆ ಏರ್ಪಡಿಸಬೇಕು ಎಂದು ಹಕ್ಕೊತ್ತಾಯ ಕೇಳಿಬಂತು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ,  2021 ರ ಉತ್ಸವವ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯಮಟ್ಟದ ಉತ್ಸವ ಆಚರಣೆಯ ಘೋಷಣೆ ಮಾಡಿ ಹೋಗಿದ್ದರು. ಅದರ ರೂಪುರೇಷೆಗಳು ಹೇಗಿರಬೇಕು, ಉತ್ಸವ ಯಶಸ್ಸಿಗೆ ಪ್ರಯತ್ನ ಹೇಗಿರಬೇಕು ಎಂಬಿತ್ಯಾದಿ ವಿಷಯ ಚರ್ಚಿಸಲು ಈ ಸಭೆ ಆಯೋಜಿಸುವ ತೀರ್ಮಾನ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಹಂಪಿ ಮತ್ತು ಮೈಸೂರು ದಸರಾ ಮಾದರಿಯಲ್ಲಿ ರಾಜ್ಯಮಟ್ಟದ ಕಿತ್ತೂರು ಉತ್ಸವ ಆಚರಣೆಯನ್ನು ಈ ಬಾರಿ ನೆರವೇರಿಸುವ ಉದ್ದೇಶದೊಂದಿಗೆ ಸರ್ಕಾರ ಸಾರ್ವಜನಿಕರೊಂದಿಗೆ ಸಭೆ ಇಟ್ಟುಕೊಂಡಿದೆ. ನೀವು ನೀಡಿರುವ ಸಭೆಯ ತೀರ್ಮಾನಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗುವುದು. ಅವರ ಜೊತೆ ಚರ್ಚೆ ಮಾಡಿದ ನಂತರ ಇದಕ್ಕೊಂದು ಸ್ವರೂಪ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಪ್ರತಿವರ್ಷ ರಾಣಿ ಚನ್ನಮ್ಮನ ಸಮಾಧಿ ಸ್ಥಳದಿಂದ ಹೊರಡಿಸಲಾಗುವ   ವೀರಜ್ಯೋತಿ ಮೆರವಣಿಗೆಯು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಬೇಕು. ಜಿಲ್ಲೆಯ ಹಿರಿಯ ಅಧಿಕಾರಿಗಳು ಬರಮಾಡಿಕೊಳ್ಳಬೇಕು. ಇದಕ್ಕಾಗಿ ರೂಟ್‍ಮ್ಯಾಪ್ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಸಭೆಯ ಆಶಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ಸವಕ್ಕೆ ಆಮಂತ್ರಿಸಲಾಗುವುದು. ಉದ್ಘಾಟನೆ ಅವರಿಂದ ನೆರವೇರಲಿ ಎಂಬುದು ಇಲ್ಲಿನವರ ಆಶಯವಾಗಿದೆ. ವಿಚಾರಗೋಷ್ಟಿ, ಕವಿಗೋಷ್ಟಿ,   ಕ್ರೀಡಾಕೂಟ ಆಯೋಜಿಸಲಾಗುವುದು. ಹಂಪಿ ಅಥವಾ ಮೈಸೂರು  ದಸರಾ  ಮಾದರಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಅನಿಸಿಕೆ ನನ್ನದೂ ಆಗಿದೆ ಎಂದು ವಿವರಿಸಿದರು. 

ಸಾನಿಧ್ಯ ವಹಿಸಿದ್ದ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ನಾಡಿನ ಕೀರ್ತಿ ಹೆಚ್ಚಿಸುವ ಕೆಲಸವಾಗುತ್ತಿದೆ. ರಾಣಿ ಚನ್ನಮ್ಮನ ತ್ಯಾಗ ಮತ್ತು ಬಲಿದಾನ ಸ್ಮರಣೆಯ ಜೊತೆಗೆ ಯುವಕರಿಗೆ ಮತ್ತು ಭವಿಷ್ಯದ ಪೀಳಿಗೆಗೆ ಸ್ಪೂರ್ತಿ ಆಗುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮಾತನಾಡಿ, ಸಾರ್ವಜನಿಕರು ಕೊಟ್ಟ ಸಲಹೆಗಳಲ್ಲಿ ಕೆಲವು  ಸರ್ಕಾರದ  ಮಟ್ಟದಲ್ಲಿ ತೀರ್ಮಾನವಾಗಬೇಕಿದೆ. ಉಳಿದವುಗಳಿಗೆ ಇಲ್ಲಿಯೇ ಪರಿಹಾರ ಸಿಗಲಿದೆ ಎಂದರು. 

ಕಿತ್ತೂರು ಮತ್ತು ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನಾಗರಿಕರು ಚರ್ಚೆಯಲ್ಲಿ ಪಾಲ್ಗೊಂಡು  ತಮ್ಮ, ತಮ್ಮ ಅನಿಸಿಕೆ ಹಂಚಿಕೊಂಡರು. 

ಕನ್ನಡ ಸಂಸ್ಕøತಿ ಇಲಾಖೆ ನಿರ್ದೇಶಕ ಪ್ರಕಾಶ ನಿಟ್ಟಾಲಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಸಯೀದಾ ಆಫ್ರಿನ್‍ಬಾನು ಬಳ್ಳಾರಿ, ಕನ್ನಡ ಸಂಸ್ಕøತಿ ಇಲಾಖೆಯ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ್ ಬಸವರಾಜ ನಾಗರಾಳ,  ಇಒ ಸುಭಾಸ ಸಂಪಗಾಂವಿ, ಸಿಪಿಐ ಮಹಾಂತೇಶ ಹೊಸಪೇಟಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡ್ಡಿ, ಡಾ. ಬಸವರಾಜ ಪರವಣ್ಣವರ, ಚನಬಸಪ್ಪ ಮೊಕಾಶಿ ಇದ್ದರು.

ಉಪವಿಭಾಗಾಧಿಕಾರಿ ಶಶಿಧರ ಬಗಲಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕದಂ ನಿರೂಪಿಸಿದರು. ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ವಂದಿಸಿದರು.

ಅರಮನೆ ಪ್ರತಿರೂಪ  ಕೋಟೆ ಸಮೀಪ

ಚನ್ನಮ್ಮನ ಕಿತ್ತೂರು: ಇಲ್ಲಿಯ ಸಾರ್ವಜನಿಕರ ಒತ್ತಾಸೆಯಂತೆಯೇ ಅರಮನೆ ಪ್ರತಿರೂಪದ ಸೃಷ್ಟಿಯು ಈಗಿರುವ ಭಗ್ನ ಕಿತ್ತೂರು ಕೋಟೆ ಅವಶೇಷ ಸಮೀಪದಲ್ಲೇ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮಾಹಿತಿ ನೀಡಿದರು. ರಾಜ್ಯಮಟ್ಟದ ಉತ್ಸವ ಆಚರಣೆ ಚರ್ಚೆಯಲ್ಲಿ ಉಪಸ್ಥಿತರಿದ್ದ ಅವರು ಮಾತನಾಡಿ, ಇದಕ್ಕಾಗಿ ಜಾಗೆ ಗುರುತಿಸುವಂತೆ ಸರ್ಕಾರ ಸೂಚನೆ ನೀಡಿದೆ. ಜಾಗೆ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು. ಜನರ ಆಗ್ರಹದಂತೆ ಕೋಟೆ ಬಳಿಯೇ ಕಿತ್ತೂರು ಅರಮನೆ ಪುನರ್ ಸೃಷ್ಟಿ ಆಗುವುದು ಜಿಲ್ಲಾಡಳಿತದ ಹೇಳಿಕೆಯಿಂದ ಖಚಿತವಾದಂತಾಗಿದೆ.

0/Post a Comment/Comments