ದೊಡ್ಡಗೌಡರ ಜನ್ಮದಿನ: 40 ಸಾವಿರ ಜನರು ಭಾಗಿ - Kittur

ದೊಡ್ಡಗೌಡರ ಜನ್ಮದಿನ: 40 ಸಾವಿರ ಜನರು ಭಾಗಿ

ಪ್ರೆಸ್‍ಕ್ಲಬ್ ವಾರ್ತೆ

ಎಂ. ಕೆ. ಹುಬ್ಬಳ್ಳಿ: ಗೆಳೆಯರ ಬಳಗ ಮತ್ತು ಹಿತೈಷಿಗಳಿಂದ ಸೆ.2 ರಂದು ಇಲ್ಲಿ ಆಯೋಜಿಸಲಾಗಿರುವ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಜನ್ಮದಿನದ ಕಾರ್ಯಕ್ರಮಕ್ಕೆ 40 ಸಾವಿರ ಜನರು ಸಾಕ್ಷಿಯಾಗಲಿದ್ದಾರೆ ಎಂದು ಆಯೋಜನೆಯ ಮುಂಚೂಣಿ ನಾಯಕರಲ್ಲೊಬ್ಬರಾಗಿರುವ ಪ್ರಕಾಶ ಮೂಗಬಸವ ತಿಳಿಸಿದರು. 

ಪಟ್ಟಣದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಬೃಹತ್ ವೇದಿಕೆ ನಿರ್ಮಾಣ ಸ್ಥಳದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆಗಮಿಸುವ ಜನರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಸುಮಾರು 10 ಸಾವಿರ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಯಿದೆ. ಕಿತ್ತೂರು, ಬೆಳಗಾವಿ, ಬೈಲಹೊಂಗಲ ತಾಲೂಕಿನ ಖ್ಯಾತ ವೈದ್ಯರು ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ ಮಾತನಾಡಿ, ಎರಡು ವರ್ಷಗಳ ಕೋವಿಡ್ ಸಂಕಷ್ಟ ಕಾಲದಲ್ಲೂ ಸರ್ಕಾರದಿಂದ ರೂ. 2400 ಕೋಟಿ ಅನುದಾನ ತಂದು ಕ್ಷೇತ್ರಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಜನ್ಮದಿನದ ಅಂಗವಾಗಿ ಕಿತ್ತೂರು ಕ್ಷೇತ್ರಾದ್ಯಂತ ಬರುವ ಎಲ್ಲ ಊರುಗಳ ಮಠ, ಮಂದಿರಗಳಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಲಿದ್ದಾರೆ ಎಂದರು. 

ಬಿಜೆಪಿ ಹಿರಿಯ ಮುಖಂಡ ಚಿನ್ನಪ್ಪ ಮುತ್ನಾಳ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಶಾಸಕರ ಜನ್ಮ ದಿನವನ್ನು ಅಭಿಮಾನಿಗಳಿಗೆ ಆಚರಿಸಲಾಗಲಿಲ್ಲ. ಈಗ ಅಭಿಮಾನಿಗಳೆಲ್ಲ ಸೇರಿ ಜನ್ಮದಿನ ಸಂಭ್ರಮಿಸುತ್ತಿದ್ದೇವೆ ಎಂದರು. 

70 ಸ್ವಾಮೀಜಿಗಳು ಸಾನಿಧ್ಯ

ಸೆ. 2 ರಂದು ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ 70 ಸ್ವಾಮೀಜಿಗಳು ಸಾನಿಧ್ಯ ವಹಿಸುವರು. ಜಿಲ್ಲೆಯ ಮಂತ್ರಿಗಳು, ಶಾಸಕರು, ರಾಜಕೀಯ  ಮುಖಂಡರು  ವೇದಿಕೆ ಕಾರ್ಯಕ್ರಮದಲ್ಲಿರುತ್ತಾರೆ. ರಕ್ತದಾನ ಶಿಬಿರವೂ ನಡೆಯಲಿದೆ ಎಂದು ಶ್ರೀಕರ ಕುಲಕರ್ಣಿ ತಿಳಿಸಿದರು.

ಬಿ. ಕೆ. ಪಾಟೀಲ, ಈಶ್ವರ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಸಂದೀಪ ದೇಶಪಾಂಡೆ, ಬಿ. ಎಫ್. ಕೊಳದೂರ, ಎಸ್. ಆರ್. ಪಾಟೀಲ, ಶ್ರೀಶೈಲ್ ಪಾಗಾದ, ಸಿದ್ರಾಮಯ್ಯ ಹಿರೇಮಠ, ಬಸವರಾಜ ಪುಟ್ಟಿ, ಕಿರಣ ಪಾಟೀಲ, ಶಿವಾನಂದ ಹನುಮಸಾಗರ, ನಾಗರಾಜ ಅಸುಂಡಿ ಉಪಸ್ಥಿತರಿದ್ದರು.