ಕಾಂಗ್ರೆಸ್‍ಗೆ ಭದ್ರ ನೆಲೆ ಒದಗಿಸಿದ್ದೇ ಇನಾಮದಾರ - Kittur


ಕಾಂಗ್ರೆಸ್‍ಗೆ ಭದ್ರ ನೆಲೆ ಒದಗಿಸಿದ್ದೇ ಇನಾಮದಾರ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಬರುವ ವರ್ಷ 2023ರಲ್ಲಿ ನಡೆಯಲಿರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಡಿ. ಬಿ. ಇನಾಮದಾರ ಟಿಕೆಟ್ ವಂಚಿತರಾಗಲಿದ್ದಾರೆ ಎಂಬ ಅನುಮಾನ ಮೂಡುವಂತೆ ವಿರೋಧಿಗಳು ಆಡುತ್ತಿರುವ ಮಾತುಗಳು ಇನಾಮದಾರ ಬೆಂಬಲಿಗರ ವಿಡಂಬನೆಗಳಿಗೆ ಒಳಗಾಗುತ್ತಿದೆ.
ಇನಾಮದಾರ ನಡೆದದ್ದೆ ದಾರಿ. ಮೊದಲು ಜನತಾ ಪಕ್ಷದಿಂದ ಕಿತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಎದುರಿಸಿದರು. ಪ್ರಥಮ ಪ್ರಯತ್ನದಲ್ಲಿಯೇ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಮಂತ್ರಿ ಆಗುವ ಭಾಗ್ಯವೂ ಅವರಿಗೆ ಸಿಕ್ಕಿತ್ತು. 1985ರಲ್ಲಿ ಆಗಮಿಸಿದ್ದ ಮಧ್ಯಂತರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಗೆದ್ದು ಮಂತ್ರಿ ಆದರು. 1989 ರ ಚುನಾವಣೆಯಲ್ಲಿ ಪಕ್ಷದ ಆಂತರಿಕ ಬೇಗುದಿಯಲ್ಲಿ ಬೆಂದು ಹೋಗಿದ್ದ ಜನತಾ ಪಕ್ಷ ಒಡೆದು ಹೋಳಾಗಿತ್ತು. ಜನತಾದಳ ಎಂಬ ದೇವೇಗೌಡರ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು. ಇದರಿಂದ ಬೇಸತ್ತ ಇನಾಮದಾರ ಅವರು ಅಂದು ಆಯ್ಕೆ ಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷವನ್ನು.
ರೈತ ಸಂಘಟನೆ ಮೂಲಕ 1989ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಾಬಾಗೌಡ ಅವರು 1994 ರ ಚುನಾವಣೆಯಲ್ಲಿ ಮರು ಸ್ಪರ್ಧಿಸಿದ್ದರು. ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಬಾಗೌಡ ವಿರುದ್ಧ ಇನಾಮದಾರ ಕಣಕ್ಕಿಳಿದಿದ್ದರು. 89ರಲ್ಲಿಯ ಸೋತ ಸೇಡನ್ನು ಅಂದು ಇನಾಮದಾರ ಅವರು ತೀರಿಸಿಕೊಂಡಿದ್ದು ಈಗ ಇತಿಹಾಸ. 
ಅನಂತರ ಬಂದ 1999 ರ ಚುನಾವಣೆಯಲ್ಲೂ ಸ್ಪರ್ಧಿಸಿ ವಿಧಾನಸಭೆಗೆ ಮರು ಆಯ್ಕೆಯಾದರು. ಸಚಿವರೂ ಆದರು. ಹೀಗೆ ಇನಾಮದಾರ ಅವರ ಸೋಲು, ಗೆಲುವಿನ ಮುಂದುವರೆದ ಯಾನಕ್ಕೆ ಕಿತ್ತೂರು ಕ್ಷೇತ್ರ ಇಲ್ಲಿಯವರೆಗೂ ಸಾಕ್ಷಿಯಾಗಿದೆ. 
9 ಬಾರಿ ಚುನಾವಣೆಗೆ ಸ್ಪರ್ಧಿಸಿರುವೆ. ಅವುಗಳಲ್ಲಿ ನಾಲ್ಕು ಬಾರಿ ಸೋಲು ಕಂಡಿರುವೆ ಎಂದು ಆಪ್ತರ ಮುಂದೆ ಇನಾಮದಾರ ಅವರು ಹೇಳಿಕೊಂಡಿದ್ದಿದೆ. 
ಯಾರೂ ಬೆಳೆಯುತ್ತಿರಲಿಲ್ಲ
ಇನಾಮದಾರ ಅವರು ರಾಜಕೀಯ ಅಧಿಕಾರದ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅವರು ಮನಸ್ಸು ಮಾಡಿದ್ದರೆ ಜಿಲ್ಲೆಯಲ್ಲಿ ಯಾವ ನಾಯಕರನ್ನು ಬೆಳೆಯಗೊಡುತ್ತಿರಲಿಲ್ಲ. ಅಷ್ಟೊಂದು ಪ್ರಭಾವ 80 ಮತ್ತು 90 ದಶಕದಲ್ಲಿ ಅವರು ಹೊಂದಿದ್ದರು ಎಂದು ಇನಾಮದಾರ ಅಭಿಮಾನಿಗಳು ನುಡಿಯುತ್ತಾರೆ. 
ನಮ್ಮ ಜೊತೆಗೆ ಅವರೂ ಬೆಳೆಯಲಿ ಎಂದು ಬಯಸಿದರು. ಅವರಲ್ಲಿಯೇ ಕೆಲವರಿಂದು  ಇನಾಮದಾರÀ ಸ್ಪರ್ಧೆಗೆ  ಅಡ್ಡಗಾಲು ಹಾಕುತ್ತಿದ್ದಾರೆ. ಆದರೆ ಹೈಕಮಾಂಡ್‍ನಲ್ಲಿ ಅವರು ಪ್ರಭಾವ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದನ್ನು ಗಮನಿಸಿಯೇ ‘ಇನಾಮದಾರ ನಮ್ಮ ಆತ್ಮೀಯರು. ನಾನು  ಅವರ ಜತೆಯಲ್ಲಿ ಶಾಸಕ ಮತ್ತು ಸಚಿವನಾಗಿ ಕೆಲಸ ಮಾಡಿದ್ದೇನೆ’ ಎಂದು ಮೊನ್ನೆ ಕಿತ್ತೂರಿಗೆ ಬಂದಾಗ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಹೇಳಿದರು ಎಂದು ಸ್ಮರಿಸುತ್ತಾರೆ ಅವರು. 
ಅವರಿಂದಲೇ ಭದ್ರ ನೆಲೆ
ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಭದ್ರ ನೆಲೆ ಒದಗಿಸಿದವರೇ ಮಾಜಿ ಸಚಿವ ಇನಾಮದಾರ. ಅವರು ಹೋದರೆ ಇಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತದೆ. ಇದನ್ನು ಹೈಕಮಾಂಡ್ ಅರಿತುಕೊಳ್ಳಬೇಕು. ಕ್ಷೇತ್ರದ ಇತಿಹಾಸ ಅರಿತು ಅವರಿಗೆ ಟಿಕೆಟ್ ನೀಡಿದರೆ ದಕ್ಷ ಮತ್ತು ಕ್ಷೇತ್ರದಲ್ಲಿ ಪ್ರಾಮಾಣಿಕರಾಗಿರುವ ಅವರು ಕಾಂಗ್ರೆಸ್ ಬಾವುಟವನ್ನು ಎತ್ತರಕ್ಕೆ ಹಾರಿಸುತ್ತಾರೆ ಎಂದೂ  ಅಭಿಮಾನಿಗಳು ನುಡಿಯುತ್ತಾರೆ.

ಟಿಕೆಟ್ ಗಿಟ್ಟಿಸುವಲ್ಲಿ ಸತತ ಗೆದ್ದವರು ಇನಾಮದಾರ

2013 ಮತ್ತು 2018 ರ ವಿಧಾನಸಭೆ ಚುನಾವಣೆಯಲ್ಲಿ ಇನಾಮದಾರ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ವಿರೋಧಿಗಳು ದೊಡ್ಡ ಗುಲ್ಲು ಎಬ್ಬಿಸಿದ್ದರು ಎಂದು ಹಿಂದಿನ ಘಟನಾವಳಿಗಳನ್ನು ಮೆಲುಕು ಹಾಕುತ್ತಾರೆ ಅಭಿಮಾನಿಗಳು.
2013 ರಲ್ಲಿ ಜಿಲ್ಲೆಯ ನಾಯಕರೊಬ್ಬರು ಆನಂದ ಅಪ್ಪುಗೋಳ ಅವರ ಹೆಸರು ಚಲಾವಣೆಗೆ ತಂದಿದ್ದರು. ಕೆಲವು ಟಿವಿ ಚಾನಲ್‍ಗಳಂತೂ ಅಪ್ಪುಗೋಳ ಹೆಸರು ಅಂತಿಮಗೊಳಿಸಿ ಬಿತ್ತರಿಸಲು ಆರಂಭಿಸಿದ್ದವು. ಆದರೆ ಏನಾಯಿತೆಂಬುದು ಎಲ್ಲರಿಗೂ ಗೊತ್ತಿದೆ. 
2018 ರಲ್ಲಿ ಮತ್ತೆ ಬಾಬಾಸಾಹೇಬ ಪಾಟೀಲ ಅವರ ಹೆಸರನ್ನು ಜಿಲ್ಲೆಯ ಇಬ್ಬರು ನಾಯಕರು ಸೇರಿಕೊಂಡು ಚಲಾವಣೆಗೆ ತಂದರು. 13 ರ ಸನ್ನಿವೇಶವನ್ನು ಟಿವಿ ಚಾನಲ್‍ಗಳು ಮರುಸೃಷ್ಟಿ ಮಾಡಿದವು. ಬಾಬಾಸಾಹೇಬ ಅವರ ಹೆಸರು ಅಂತಿಮಗೊಂಡಿದೆ ಎಂದು ಹೇಳಿಕೊಂಡವು. ಆದರೆ ಅಂತಿಮ ಹೋರಾಟದಲ್ಲಿ ಇನಾಮದಾರ ಅವರಿಗೇ ಟಿಕೆಟ್ ದಕ್ಕಿತು.
2023 ರ ಚುನಾವಣೆಗೆ ಮುನ್ನ ಅವೇ ವದಂತಿಗಳು ಮರುಹುಟ್ಟು ಪಡೆದುಕೊಂಡಿವೆ. ಜಿಲ್ಲೆಯಲ್ಲಿಯ ಬಾಬಾಸಾಹೇಬ ಬೆಂಬಲಿಗರಲ್ಲಿ ಒಬ್ಬರು ಈಗ ಬಿಜೆಪಿ ಸೇರಿಕೊಂಡಿದ್ದಾರೆ. ಒಬ್ಬರು ಉಳಿದುಕೊಂಡಿದ್ದಾರೆ. ಇನಾಮದಾರ ಬಯಸಿದರೆ ಅಂತಿಮವಾಗಿ ಅವರೇ ಟಿಕೆಟ್ ತರುತ್ತಾರೆ. ಹೈಕಮಾಂಡ್‍ನಲ್ಲಿ ಅವರ ಹಿಡಿತ ಅಷ್ಟು ಬಿಗಿಯಾಗಿದೆ ಎನ್ನುತ್ತಾರೆ ಅಭಿಮಾನಿಗಳು. 


 

0/Post a Comment/Comments