ಕಾಂಗ್ರೆಸ್ ಭಿನ್ನಮತ ಸ್ಫೋಟ; ಬಿತ್ತು ದೊಡ್ಡ ಕಂದಕ - Kittur


ಕಾಂಗ್ರೆಸ್ ಭಿನ್ನಮತ ಸ್ಫೋಟ; ಬಿತ್ತು ದೊಡ್ಡ ಕಂದಕ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಬೂದಿ ಮುಚ್ಚಿದ ಕೆಂಡದಂತಿದ್ದ ಕಿತ್ತೂರು ವಿಧಾನಸಭೆ ಕ್ಷೇತ್ರದ ಬಣ ರಾಜಕೀಯವು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಗಮನದಿಂದಾಗಿ ನಿಗಿ,ನಿಗಿ ಕೆಂಡದ ಸ್ವರೂಪವನ್ನು ಪಡೆದುಕೊಂಡು ನಿಂತಿದೆ.  ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಿ. ಬಿ. ಇನಾಮದಾರ ಬಣವನ್ನು ಕಡೆಗಣಿಸಿರುವುದು ಈ ವಿಸ್ಫೋಟಕ್ಕೆ ಕಾರಣವಾಗಿದೆ.

ಕಳೆದ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಹೊರಟಿದ್ದ ಬಾಬಾಸಾಹೇಬ ಪಾಟೀಲ ಅವರಿಗೆ ಕೊನೆ ಕ್ಷಣದಲ್ಲಿ ಈ ಪಕ್ಷ ವಂಚನೆ ಮಾಡಿದ್ದರಿಂದ ಪಕ್ಷೇತರರಾಗಿ ಕಣಕ್ಕಿಳಿದರು. ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಇನ್ನಿಲ್ಲದ ಸಾಹಸ ಪಟ್ಟಿದ್ದರು. ಆದರೆ ಕೊನೆಗೂ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಹಾಗೂ ಶಾಸಕರೂ ಆಗಿದ್ದ ಇನಾಮದಾರ ಅವರಿಗೆ ಟಿಕೆಟ್ ನೀಡಿತ್ತು. 

ಬಾಬಾಸಾಹೇಬ ಅವರೇನೊ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಂದು ಕಣಕ್ಕಿಳಿದರು. ಇದು ಇನಾಮದಾರ   ಸೋಲಿಗೂ ಕಾರಣವಾಯಿತು. ಏತನ್ಮಧ್ಯೆ, ಅನೇಕ ರಾಜಕೀಯ ಸ್ಥಿತ್ಯಂತರ ನಡೆದು ಕೊನೆಗೂ ಬಾಬಾಸಾಹೇಬ ಪಾಟೀಲ ಅವರು ಕೈ ಪಕ್ಷದ ತೆಕ್ಕೆಗೆ ಮರಳಿದರು.

ಅನಂತರ ಬಂದ ಲೋಕಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್‍ಗೆ ನಡೆದ ಚುನಾವಣೆ, ಕೆಲ  ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಕ್ರಿಯ ಪಾತ್ರ ವಹಿಸಿ ಓಡಾಡಿದರು. ಇದಕ್ಕೆ ಪರ್ಯಾಯವಾಗಿ ಇನಾಮದಾರ ಬಣದ ಬಣ್ಣವೂ ಕೂಡಾ ಸ್ಪರ್ಧಿಸಿದವರ ಗೆಲುವಿಗೆ ಶ್ರಮ ವಹಿಸಿತು.

ಏನೆಲ್ಲ ನಡೆದರೂ ಎರಡೂ ಬಣಗಳಲ್ಲಿ ಬಿರುಕು ಮಾತ್ರ ದೊಡ್ಡಗಾಗುತ್ತಲೇ ಹೋಯಿತು. ಪಕ್ಷದ ವಿಧಾನಸಭೆ ಉಸ್ತುವಾರಿ, ವೀಕ್ಷಕರು, ನಾಯಕರು, ಸ್ವತಃ ಬಾಬಾಸಾಹೇಬ ಪಾಟೀಲ ಅವರು ‘ಏನು ನಿಮ್ಮ ಸಮಸ್ಯೆ’ ಎಂದು ಕೇಳಲು ಹೋಗಲಿಲ್ಲ. ‘ನಮ್ಮ ಜೊತೆ ಬನ್ನಿ’ ಎಂದು ಕರೆಯಲಿಲ್ಲ. ಹೀಗಾಗಿ ಎರಡೂ ಬಣಗಳ ನಡುವಿನ ಕಂದಕದ ಗಾತ್ರ ದೊಡ್ಡದಾಗುತ್ತ ಹೋಯಿತು ಎನ್ನುತ್ತಾರೆ ಇನಾಮದಾರ ಬಣದ ಸದಸ್ಯರು.

ವಿಸ್ಫೋಟ

ಕಾಂಗ್ರೆಸ್ ಪಕ್ಷದ ಏನೇ ಚಟುವಟಿಕೆ ನಡೆದರೂ ಬಾಬಾಸಾಹೇಬ ಮತ್ತು ಅವರ ಬೆಂಬಲಿಗರೇ ಕಾಣಿಸುತ್ತಿದ್ದರು. ಇನಾಮದಾರ ಬಣದವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ. ಜು. 22 ರಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು  ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಆಮಂತ್ರಣ ಕೊಡುವ ಕಾರ್ಯಕ್ರಮಕ್ಕೆ ಬಂದಾಗಲೂ, ಇದರ ಪ್ರಯುಕ್ತ ಕೋಟೆ ಆವರಣದ ಮುಂದೆ  ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲು   ಬರುತ್ತಿದ್ದ ಸಂದರ್ಭದಲ್ಲೂ  ಇನಾಮದಾರ ಬಣದವರಿಗೆ ಏನೂ ಆಮಂತ್ರಣ ನೀಡಿರಲಿಲ್ಲ.  ನಮಗೆ  ಈ  ಕಾರ್ಯಕ್ರಮದ ಮಾಹಿತಿಯೇ ಇರಲಿಲ್ಲ ಎಂದು ದೂರುತ್ತಾರೆ ಇನಾಮದಾರ ಬಣದ ಸದಸ್ಯರು.

ಇದರಿಂದ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ಭಿನ್ನ ಬಣದವರು ಬಹಿಷ್ಕರಿಸಲಿಲ್ಲ. ಬದಲಾಗಿ ಪ್ರತ್ಯೇಕ ತಂಡ ರಚಿಸಿಕೊಂಡು ಆಹ್ವಾನ ನೀಡದಿರುವ ಬಾಬಾಸಾಹೇಬರ ಬಣದ ವಿರುದ್ಧ ಕೆಂಡ ಉಗುಳಲು ಪ್ರಾರಂಭಿಸಿದರು. ಡಿಕೆಶಿ ಬರುವ ವೇಳೆ ಕೈಯಲ್ಲಿ ಭಿತ್ತಿ ಹಿಡಿದು ಮೂಲ ಕಾಂಗ್ರೆಸ್ಸಿಗರಿಗೆ ಮನ್ನಣೆ ನೀಡಬೇಕು ಎಂದು ಘೋಷಣೆ ಕೂಗಿದರು. ವಲಸಿಗರಿಗೆ ಟಿಕೆಟ್ ನೀಡಬಾರದು ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಂದ್ರು ಡಿಕೆಶಿ

ಕೋಟೆ ಆವರಣದ ಮುಂದೆ ನಡೆದ ಸಭೆ ಮುಗಿದ ಬಳಿಕ ಸುದ್ದಿ ತಿಳಿದ ಡಿಕೆಶಿ ಅವರು ಸರ್ವಿಸ್ ರಸ್ತೆಯಲ್ಲಿ ಧರಣಿ ನಡೆಸಿದ್ದ ಇನಾಮದಾರ ಬಣದ ಹತ್ತಿರ ಬಂದರು. ನೇತೃತ್ವ ವಹಿಸಿದ್ದ ಹಬೀಬ ಶಿಲೇದಾರ,  ಶಂಕರ  ಹೊಳಿ, ಬೆಂಬಲಿಗರಾಗಿದ್ದ  ಅರುಣ ಬಿಕ್ಕಣ್ಣವರ, ಪುಂಡಲೀಕ ನೀರಲಕಟ್ಟಿ, ವiಹಾಂತೇಶ ಕಂಬಾರ, ಸಂಜೀವ ಲೋಕಾಪುರ, ವಿಜಯಕುಮಾರ ಶಿಂಧೆ, ಅಬ್ದುಲ್ ಮುಲ್ಲಾ  ಮತ್ತು ಬೆಂಬಲಿಗರ ಜೊತೆ ರಸ್ತೆ ಮೇಲೆ ಕುಳಿತು ಸಮಸ್ಯೆ ಆಲಿಸಿದರು. 

ಇನಾಮದಾರ ಬೆಂಬಲಿಗರಿಗೂ ದೊಡ್ಡದೊಂದು ಸಂದೇಶ ರವಾನಿಸಿ ಅವರು ಹೋಗಿದ್ದಾರೆ. ಹಿರಿಯ ನಾಯಕರು, ನನಗೆ ಆತ್ಮೀಯರೂ ಆಗಿರುವ ಇನಾಮದಾರ ಅವರನ್ನು ಬಿಟ್ಟು ಕಿತ್ತೂರು ಕ್ಷೇತ್ರದಲ್ಲಿ ಏನೂ ಮಾಡುವುದಿಲ್ಲ ಎಂದು ಭರವಸೆ ನೀಡಿ ತೆರಳಿದ್ದಾರೆ. ‘ನಮಗೂ ಇಷ್ಟು ಬೇಕಾಗಿತ್ತು’ ಎನ್ನುತ್ತಿವೆ ಇನಾಮದಾರ ಬಣದ ಮನಸುಗಳು. 

ಉಗುರಿನಿಂದ ಹೋಗಬಹುದಾಗಿದ್ದ ಸಮಸ್ಯೆಗೆ ಕೊಡಲಿ ಹಚ್ಚಿದರೂ ಹೋಗದಂತಹ ಕೆಲಸವನ್ನು ಸ್ವತಃ ಬಾಬಾಸಾಹೇಬರು ಮಾಡಿಕೊಂಡರೇ ಎಂಬ ಪ್ರಶ್ನೆ ಕೆಲವರ ಮುಂದೆ ಏಳುವಂತೆ ಆಗಿದೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.

ಅವರಿಗೆ ಟಿಕೆಟ್...!

ಕಾಂಗ್ರೆಸ್ ಪಕ್ಷದಲ್ಲಿ ಡಿ. ಬಿ. ಇನಾಮದಾರ ಅವರು ಅತ್ಯಂತ ಹಿರಿಯ ನಾಯಕರು. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸಂಪುಟದಲ್ಲಿ ಅತ್ಯಂತ ದಕ್ಷವಾಗಿ ಕೆಲಸ ಮಾಡಿದ ಪ್ರಶಂಸೆಗೆ ಅವರು ಒಳಗಾಗಿದ್ದೂ ಇದೆ. ಇನ್ನು ಟಿಕೆಟ್ ವಿಷಯಕ್ಕೆ ಬಂದರೆ ಗಾಂಧಿ ಕುಟುಂಬದ ಆಪ್ತ ವಲಯದಲ್ಲಿದ್ದ ಆಸ್ಕರ್ ಫರ್ನಾಂಡಿಸ್ ಅವರು ಇನಾಮದಾರ ಅವರಿಗೆ ಅತ್ಯಂತ ಆಪ್ತರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರೂ ಅಷ್ಟೇ ಆಪ್ತರು. ಪಕ್ಷದ ವರಿಷ್ಠೆಯಾಗಿರುವ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಅವರ ಮುಂದೆ ನಿಂತು ಮಾತನಾಡುವ ತಾಕತ್ತು ಉಳ್ಳವರು ಇನಾಮದಾರ ಅವರು. ಇದನ್ನು ಕಂಡು ಏನೋ ಕಾಂಗ್ರೆಸ್ ಮುಖಂಡರೊಬ್ಬರು ‘ಇನಾಮದಾರ ಇರುವವರೆಗೆ ಅವರಿಗೇ ಟಿಕೆಟ್ಟು, ಬೇರೆಯವರಿಗೆ ಬೇಕೆಂದರೆ ಅವರ ಡೆತ್ ಸರ್ಟಿಫಿಕೆಟ್ ಹೈಕಮಾಂಡ್ ಮುಂದೆ ಹಾಜರು ಪಡಿಸಬೇಕು’ ಎಂದಿರುವುದನ್ನು ಕೆಲವರು ನೆನಪಿಸಿಕೊಳ್ಳುತ್ತಾರೆ. ದಿಲ್ಲಿ ಮಟ್ಟದಲ್ಲಿ ಇನಾಮದಾರ ಹಿಡಿತ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಅವರ ಮಾತು ಇದಕ್ಕೆ ಹೆಚ್ಚು ಪುಷ್ಟಿ ನೀಡುವಂತಿದೆ ಎಂದು ಬೀಗುತ್ತಾರೆ ಇನಾಮದಾರ ಬಣದ ಸದಸ್ಯರು.

ಎಲ್ಲವೂ ಸರಿಯಾಗಿದೆ...

ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನ ಆಚರಣೆಗಾಗಿ ಎರಡು ದಿನ ಮೊದಲು ಬೈಲಹೊಂಗಲ ಮತ್ತು ಕಿತ್ತೂರು ಪತ್ರಕರ್ತರನ್ನು ಆಮಂತ್ರಿಸಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಹಾಗೂ ಬಾಬಾಸಾಹೇಬ ಅವರ ಪತ್ನಿ ರೋಹಿಣಿ ಪಾಟೀಲ ಅವರು ‘ನಮ್ಮಲ್ಲೇನೂ ಬಣಗಳಿಲ್ಲ. ಎಲ್ಲರೂ ಒಂದಾಗಿದ್ದಾರೆ. ದೊಡ್ಡವರೂ (ಇನಾಮದಾರ) ಒಂದಾಗಲಿದ್ದಾರೆ. ಕಳೆದ ಬಾರಿ ನಡೆದ ಕಹಿ ಘಟನೆಗಳು ಈ ಬಾರಿ ಮರುಕಳಿಸುವುದಿಲ್ಲ’ ಎಂದು ಹೇಳಿದ್ದರು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಾಬಾಸಾಹೇಬ ಅವರ ಜನ್ಮದಿನವಾದ ಜು. 22 ರಂದೇ ಬಣ ರಾಜಕೀಯವು ಆಕ್ರೋಶದ ಪರಾಕಾಷ್ಠೆ ತಲುಪಿರುವುದು ವಿಪರ್ಯಾಸವಾಗಿದೆ.