ಆಮ್ ಆದ್ಮಿ ಪಕ್ಷದ ನೂತನ ಪ್ರತಿಭಟನೆ - Kittur


 ಆಮ್ ಆದ್ಮಿ ಪಕ್ಷದ ನೂತನ ಪ್ರತಿಭಟನೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಅವರೆಲ್ಲ ಬುಧವಾರ ಅಡುಗೆ ಎಣ್ಣೆ, ಹಾಲು, ಮೊಸರು ಪ್ಯಾಕೆಟ್ ಮತ್ತು ಎಲ್‍ಪಿಜಿ ಸಿಲಿಂಡರ್ ಹೊತ್ತುಕೊಂಡು ಸ್ಥಳೀಯ ತಹಶೀಲ್ದಾರ್ ಕಚೇರಿಯ ಮುಖ್ಯ ದ್ವಾರಕ್ಕೆ ಬಂದಿದ್ದರು. ತಂದ ಈ ಆಹಾರ ಪದಾರ್ಥಗಳ ಪ್ಯಾಕೆಟ್‍ಗಳನ್ನು ಸಿಲಿಂಡರ್‍ಗೆ ಕಟ್ಟಿ ಪ್ರತಿಭಟನೆ ಮಾಡಿದರು. ಕೇಂದ್ರದ ಬೆಲೆಯೇರಿಕೆ ನೀತಿ ವಿರುದ್ಧ ಈ ರೀತಿ ನೂತನವಾಗಿ ಪ್ರತಿಭಟಿಸಿದವರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು.

ಅನಂತರ ಕಿತ್ತೂರು ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಆನಂದ ಹಂಪಣ್ಣವರ ಮಾತನಾಡಿ ಬೇಳೆ ಕಾಳು, ಹಾಲು, ಮೊಸರು, ಮಜ್ಜಿಗೆ ಸೇರಿ ವಿವಿಧ ಆಹಾರ ಪದಾರ್ಥಗಳನ್ನು ಪ್ಯಾಕೆಟ್ ಮಾಡಿ ಮಾರಾಟ ಮಾಡುವುದು ವಾಡಿಕೆ. ಗ್ರಾಹಕರ ಹಿತದೃಷ್ಟಿಯಿಂದ ಇದು ಒಳ್ಳೆಯದೂ ಕೂಡಾ ಆಗಿದೆ. ಆದರೆ ಈ ಪೊಟ್ಟಣಗಳ ಮೇಲೂ ಜಿಎಸ್‍ಟಿ ತೆರಿಗೆ ವಿಧಿಸುತ್ತಿದೆ. ಇದು ಗ್ರಾಹಕರ ಹೊಟ್ಟೆ ಮೇಲೆ ಹೊಡೆಯುವ ಕೆಟ್ಟ ಕ್ರಮವಾಗಿದೆ ಎಂದು ಕೇಂದ್ರ ಸರ್ಕಾರವನ್ನು   ತರಾಟೆಗೆ ತೆಗೆದುಕೊಂಡರು. 

ಕೇಂದ್ರದ ಈ ರೀತಿಯ ಕ್ರಮ ದುರದೃಷ್ಟಕರ ಮತ್ತು ದುರಂತ ಎಂದು ಟೀಕಿಸಿದರು. 

ಪೆಟ್ರೋಲ್, ಡಿಸೇಲ್ ಮೇಲೆಯೂ ವ್ಯಾಟ್ ಮೂಲಕ ಹೆಚ್ಚು ತೆರಿಗೆ ವಿಧಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್ ದರ ರಾಕೆಟ್‍ನಂತೆ ಮೇಲೇರಿದೆ. ಕೆಂದ್ರದ ತೆರಿಗೆ ನೀತಿಯಿಂದಾಗಿ ಗ್ರಾಹಕರಿಗೆ ದಿಕ್ಕು ತೋಚದಂತಾಗಿದೆ ಎಂದರು. ಬೇಷರತ್ತಾಗಿ  ಜಿಎಸ್  ಟಿ ಹಿಂಪಡೆಯಬೇಕು, ಇಲ್ಲದಿದ್ದರೆ ಪಕ್ಷದ ವತಿಯಿಂದ ತೀವ್ರ ಹೋರಾಟ ರೂಪಿಸಬೇಕಾಗುತ್ತದೆ  ಎಂದು ಎಚ್ಚರಿಸಿದರು. ವಿಧಾನಸಭೆ ಘಟಕದ ಪ್ರಧಾನ ಕಾರ್ಯದರ್ಶಿ ವಿಠ್ಠಲ ಮಿರಜಕರ,   ಸಂಘಟನಾ ಕಾರ್ಯದರ್ಶಿ  ರಾಯನಗೌಡ ಪಾಟೀಲ,  ಕಾರ್ಯಕರ್ತರು ಭಾಗವಹಿಸಿದ್ದರು.