‘ಕಿತ್ತೂರು ಸಂತೆಯಲ್ಲಿ ರೈತರಿಗೆ ಕಿರುಕುಳ’
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ಪ್ರಸಿದ್ಧ ಸೋಮವಾರ ಪೇಟೆಯ ಸಂತೆಗೆ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಫಸಲು ಮಾರಾಟ ಮಾಡಲು ತರುವ ರೈತರಿಗೆ ದಲ್ಲಾಳಿಗಳಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ನೇಗಿಲಯೋಗಿ ರೈತ ಸುರಕ್ಷಾ ಸಂಘಟನೆ ಅಧ್ಯಕ್ಷ ಧರ್ಮರಾಜ ಗೌಡರ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ದಲ್ಲಾಳಿಗಳ ವರ್ತನೆಯಿಂದ ರೈತರು ನೊಂದಿದ್ದಾರೆ. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮತ್ತು ಪೊಲೀಸರು ಇವರ ಮೇಲಾಗುತ್ತಿರುವ ಮಾನಸಿಕ ಮತ್ತು ಆರ್ಥಿಕ ಕಿರುಕುಳ ತಪ್ಪಿಸಬೇಕು ಎಂದು ಆಗ್ರಹಿಸಿದರು.
ತೋಟಗಾರಿಕೆ ಬೆಳೆ ಬೆಳೆದು ಕುಟುಂಬದ ವೆಚ್ಚ ನಿರ್ವಹಿಸಲು ಹೆಣಗಾಡುವ ಸಣ್ಣ ರೈತರು ಮೆಣಸಿನಕಾಯಿ, ಸೌತೇಕಾಯಿ, ಬದನೆ ಮತ್ತಿತರ ಫಸಲನ್ನು ಮಾರುಕಟ್ಟೆಗೆ ಮಾರಾಟ ಮಾಡಲು ತರುತ್ತಾರೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಕುಳಿತುಕೊಳ್ಳುತ್ತಾರೆ. ಆದರೆ ಇಲ್ಲಿ ನೀವು (ಬೆಳೆಗಾರರು) ಮಾರಾಟ ಮಾಡುವ ಹಾಗಿಲ್ಲ ಎಂದು ದಬಾಯಿಸುತ್ತಾರೆ. ಅಲ್ಲಿಂದ ಜಾಗೆ ಖಾಲಿ ಮಾಡಿಸುತ್ತಾರೆ. ಇದರಿಂದ ಬೇಸತ್ತು ದಲ್ಲಾಳಿಗಳು ಕೇಳಿದ ಅಗ್ಗದ ದರಕ್ಕೆ ತಂದ ಫಸಲನ್ನು ಕೊಟ್ಟು ಹೋಗುವ ಸಂಕಷ್ಟ ಅವರಿಗೆ ಎದುರಾಗಿದೆ ಎಂದು ರೈತರಿಗಾಗುತ್ತಿರುವ ತೊಂದರೆಯನ್ನು ಅವರು ವಿವರಿಸಿದರು.
ಸಂತೆಗೆ ಮಾರಾಟ ಮಾಡಲು ಫಸಲು ತಂದಿರುವ ಬಡ ರೈತರ ಹಿತವನ್ನು ಅಧಿಕಾರಿಗಳು ಕಾಯಬೇಕು. ಇಂಥ ದೂರುಗಳು ಪುನಃ ಬಂದರೆ ರೈತ ಸಂಘಟನೆ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಮುಖಂಡರಾದ ಬಸನಗೌಡ ಪಾಟೀಲ, ಈರಣ್ಣ ಅಂಗಡಿ, ಈರಣ್ಣ ಹುಬ್ಬಳ್ಳಿ, ಶಿವಪ್ಪ ನೇಗಿನಹಾಳ, ಪಡೆಪ್ಪ ಬೋಗೂರ, ಮಹಾಂತೇಶ ಗೌರಿ, ಬಸಲಿಂಗ ಬೋಗೂರ, ಶಿವಪ್ಪ ಕೌಜಲಗಿ, ಪಡದಯ್ಯ ಚಿಕ್ಕಮಠ, ಸುನೀಲ ತಿಪ್ಪಣ್ಣವರ, ನಾಗಪ್ಪ ಗಣಾಚಾರಿ, ಬಾಬು ಗರಗದ, ಅದೃಶ್ಯಪ್ಪ ಕಳಸಣ್ಣವರ ಉಪಸ್ಥಿತರಿದ್ದರು.
Post a Comment