ದಾಯಾದಿ ಕೋಪಕ್ಕೆ ಬೆಚ್ಚಿ ಬಿದ್ದ ಬೈಲಹೊಂಗಲ! - Kittur


 ದಾಯಾದಿ ಕೋಪಕ್ಕೆ ಬೆಚ್ಚಿ ಬಿದ್ದ ಬೈಲಹೊಂಗಲ!

ಪ್ರೆಸ್‍ಕ್ಲಬ್ ವಾರ್ತೆ

ಬೈಲಹೊಂಗಲ: ಸುಮಾರು ಎರಡು ದಶಕದ ಹಿಂದೆ ಬಿಡುಗಡೆಗೊಂಡು ಉತ್ತರ ಕರ್ನಾಟಕದ ಸಿನಿ ರಸಿಕರ ಮನಗೆದ್ದಿದ್ದ ‘ಅಮೃತ ಸಿಂಧು' ಚಲನಚಿತ್ರದ ಹಿರೋ ಶಿವರಂಜನ್  ದೇಹದ  ‘ಜೀವಬಂಧ' ಬಿಡುಗಡೆಗೊಳಿಸಲು ವಿಫಲ ಯತ್ನ ನಡೆಸಿರುವುದು ಬೈಲಹೊಂಗಲ ನಾಡನ್ನು ಬೆಚ್ಚಿ ಬೀಳಿಸಿದೆ. 

ಸ್ಯಾಂಡಲ್‍ವುಡ್‍ನಲ್ಲಿ ಸುಮಾರು ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿ ಅನಂತರ ಸಿನಿಮಾ ಸಹವಾಸ ಕಡಿಮೆ ಮಾಡಿಕೊಂಡಿದ್ದ ಶಿವರಂಜನ್ ತಮ್ಮ ಕೆಲವೊಂದು ಸ್ವಂತ ವ್ಯವಹಾರ ನಡೆಸಿಕೊಂಡು ತವರು ಬೈಲಹೊಂಗಲದಲ್ಲಿಯೇ ಇದ್ದಾರೆ.

ಮಂಗಳವಾರ ತಡರಾತ್ರಿ ಹಠಾತ್ತನೇ ಈ ದುರ್ಘಟನೆ ನಡೆದು ಹೋಗಿದೆ. ಇದೊಂದು ದಾಯಾದಿ ಕಲಹವಾ? ಗೊತ್ತಿಲ್ಲ. ‘ಹೌದು, ಈ ಕೃತ್ಯ ನಡೆಸಿದವರು ಸಹೋದರರೇ ನಿಜ' ಎಂದು ಸ್ವತಃ ಶಿವರಂಜನ್ ಒಪ್ಪಿಕೊಂಡಿದ್ದಾರೆ. ಅದೃಷ್ಟ, ಶಿವರಂಜನ್ ಅವರಿಗೆ ಏನೂ ಅಪಾಯವಾಗಿಲ್ಲ. ಅವರ ಅಭಿಮಾನಿಗಳಿಗೆ ಇದು ಸಮಾಧಾನದ ವಿಷಯ.

ಖಾಸಾ ಸಹೋದರರು

ಅಂದು ಜು. 12, ರಾತ್ರಿ ಏಳೂವರೆ, ಏಳೂ ನಾಲ್ವೈತ್ತರದ ಸಮಯ. ಬೈಲಹೊಂಗಲದ ಹಳೇ ಹನುಮಂತ ದೇವರ ಗುಡಿ ಓಣಿಯಲ್ಲಿರುವ ತಂದೆ ಗಂಗಪ್ಪಣ್ಣ ಬೋಳಣ್ಣವರ ಅವರ ಮನೆಗೆ ನಟ ನಿಂಗಪ್ಪ ಅಲಿಯಾಸ್ ಶಿವರಂಜನ್ ತಮ್ಮ ಕಾರ್ ತೆಗೆದುಕೊಂಡು ಚಾಲಕ ಸಮೇತ ಬಂದಿದ್ದಾರೆ.  

ಮೊದಲು ಚಾಲಕ ಕೆಳಗಿಳಿದಿದ್ದಾರೆ. ಅನಂತರ ಶಿವರಂಜನ್ ಇಳಿದಾಗ ವಾಹನ ಮರೆಯಾಗಿದೆ. ಒಂದು ಮೂಲದ ಮಾಹಿತಿಯಂತೆ ‘ಂ 1 ಆರೋಪಿ ಮಹೇಶ ಬಾಳಪ್ಪ ನಾವಲಗಟ್ಟಿ ರಿವಾಲ್ವಾರ್‍ನಿಂದ ಐದು ಸುತ್ತ ಫೈರ್ ಮಾಡಿದ್ದಾರೆ, ಮಿಸ್ ಆಗಿದೆ. ಅದೃಷ್ಟ ಕಾಪಾಡಿದೆ. ಇದಾದ ನಂತರ ಖಾಸಾ ಸಹೋದರ ಂ 2 ಆರೋಪಿ ಶ್ರೀಶೈಲ್ ಜೊತೆಗೆ ಪರಾರಿಯಾಗಿದ್ದಾನೆ' ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ವತಃ ನಟ ಶಿವರಂಜನ್ ಮಾಹಿತಿ ನೀಡಿದ್ದಾರೆ. 

ಬುದ್ಧಿವಾದವೇ ಕಾರಣವಾಯ್ತೇ?

ನಟ ಶಿವರಂಜನ್ ಸಹೋದರನ ಪತ್ನಿಯ ಅಕ್ಕನ ಪುತ್ರ ಹಾಗೂ ಖಾಸಾ ಸಹೋದರ ಸೇರಿ ಮಾಡಿರುವ ಈ ಕುಕೃತ್ಯಕ್ಕೆ ಬುದ್ಧಿವಾದ ಹೇಳಿದ್ದೇ ತಪ್ಪಾಯಿತೇ? ಎಂದು ಶಿವರಂಜನ್ ಪಾಶ್ಚಾತ್ತಾಪ ಪಡುವಂತಾಗಿದೆ. 

‘ನೀವು ಮಾಡುತ್ತಿರುವ ಕೃತ್ಯ ನಮ್ಮ ಪ್ರತಿಷ್ಠಿತ ಬೋಳಣ್ಣವರ ಮನೆತನದ ಘನತೆ ಹಾಳು ಮಾಡುತ್ತಿದೆ' ಎಂದು ಶಿವರಂಜನ್ ಬುದ್ಧಿವಾದ ಹೇಳಿದ್ದರಂತೆ. ಏನೇ ಆಗಲಿ ದಾಯಾದಿ ಕಲಹದ ಪರಾಕಾಷ್ಠೆಯಿಂದಾಗಿ ರಿವಾಲ್ವಾರ್‍ನಿಂದ ಸಿಡಿದ ಗುಂಡಿನ ಶಬ್ದಕ್ಕೆ ಬೈಲಹೊಂಗಲದ ಮಸಗು ಕತ್ತಲು ಸಾಕ್ಷಿಯಾಗಿದೆ. ಪೊಲೀಸರ ತನಿಖೆ ಮಾತ್ರ ನಿಜ ಹಕೀಕತ್ ಅನ್ನು ಬಯಲು ಮಾಡಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

0/Post a Comment/Comments