ಅರಮನೆ ಪ್ರತಿರೂಪ ನಿರ್ಮಾಣಕ್ಕೆ ಸಿಗಲಿದೆ ಚಾಲನೆ - Kittur


 ಅರಮನೆ ಪ್ರತಿರೂಪ ನಿರ್ಮಾಣಕ್ಕೆ ಅನುದಾನ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಖ್ಯಾತಿ ಹೊಂದಿದ್ದ ಬಲಿಷ್ಠ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ವೀರಭದ್ರ ಕೂಗು ಹೊಡೆದಿದ್ದ ಕಿತ್ತೂರು ಸಂಸ್ಥಾನ ದೊರೆಗಳ ಅಂದಿನ ಅರಮನೆಯ ಮಹತ್ವಾಕಾಂಕ್ಷಿಯ ಪ್ರತಿರೂಪ ನಿರ್ಮಾಣಕ್ಕೆ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಸಿಎಂ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು,  ಅಭಿವೃದ್ಧಿ ಯೋಜನೆಯಡಿಯ ರೂ. 140 ಕೋಟಿಯ ವಿಸ್ತøತ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದ್ದು, ಅನುದಾನ ಬಿಡುಗಡೆ ಮಾಡುವಂತೆ ಆದೇಶ ಮಾಡಿದರು. 

ರೂ. 113 ಕೋಟಿ ಅಂದಾಜು ವೆಚ್ಚದಲ್ಲಿ ಕಿತ್ತೂರು ಅರಮನೆ ಪ್ರತಿರೂಪ ನಿರ್ಮಾಣ, ರೂ. 18 ಕೋಟಿ ವೆಚ್ಚದಲ್ಲಿ ಕಿತ್ತೂರು ಕೋಟೆಯ ಸಂರಕ್ಷಣೆ, ಸುಧಾರಣೆ, ರೂ. 9 ಕೋಟಿ ವೆಚ್ಚದಲ್ಲಿ ಕೋಟೆ ಆವರಣದೊಳಗಿರುವ ವಸ್ತುಸಂಗ್ರಹಾಲಕ್ಕೆ ಆಧುನಿಕ ಸ್ಪರ್ಶ ನೀಡುವುದು ಪ್ರಮುಖವಾಗಿ ಸೇರಿವೆ. 

ಚನ್ನಮ್ಮ ಸ್ಮಾರಕ ಕಲಾಭವನ ನಿರ್ಮಾಣ, ಗಡಾದ ಮರಡಿಯ ಅಭಿವೃದ್ಧಿ ಸೇರಿ ಇನ್ನಿತರ ಇತಿಹಾಸ ಸಾರುವ ತಾಣಗಳನ್ನೂ ಅಭಿವೃದ್ಧಿ ಪಡಿಸಲಾಗುವುದು. ಅದರ ಜೊತೆಗೆ ಕಿತ್ತೂರಿನ ಸಮಗ್ರ ಅಭಿವೃದ್ಧಿ ಸರ್ಕಾರ ಬದ್ಧವಿದೆ ಎಂದು ಅವರು ಘೋಷಿಸಿದರು.

ಇದಕ್ಕೂ ಪೂರ್ವದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ನಿಕಟಪೂರ್ವ ಮುಖ್ಯಮಂತ್ರಿ  ಬಿ. ಎಸ್. ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ಈ ಭಾಗದ ಜನರ ಒತ್ತಾಸೆಗೆ ಓಗೊಟ್ಟು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದರು. 2020-21 ನೇ ಸಾಲಿನ ಆಯವ್ಯಯದಲ್ಲಿ ರೂ. 50 ಕೋಟಿ ಮೀಸಲಿಟ್ಟಿದ್ದರು ಎಂದು ಬೊಮ್ಮಾಯಿ ಅವರ ಗಮನಕ್ಕೆ ತಂದರು. 

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ,  ಶಾಸಕರಾದ ಸತೀಶ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಹನುಮಂತ ನಿರಾಣಿ, ಪ್ರಾಧಿಕಾರ ಸದಸ್ಯ ಉಳವಪ್ಪ ಉಳ್ಳಾಗಡ್ಡಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಶಶಿಧರ ಬಗಲಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿವಾಹಕ ಇಂಜನೀಯರ್ ಪ್ರವೀಣ ಹುಲಜಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

0/Post a Comment/Comments