ಡಿಕೆಶಿ ಆಗಮನ : ಕಾಂಗ್ರೆಸ್ ಬಣದಲ್ಲಿ ಭುಗಿಲೆದ್ದಿದೆ ಅಸಮಾಧಾನಕಾಂಗ್ರೆಸ್ ಬಣದಲ್ಲಿ ಭುಗಿಲೆದ್ದಿದೆ ಅಸಮಾಧಾನ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂಬ ವಿಷಯ ಗಮನಕ್ಕೆ ಬರುತ್ತಿದ್ದಂತೆ ಹಿರಿಯ ಕಾಂಗ್ರೆಸ್ ಮುಖಂಡರ ಬೆಂಬಲಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ.

ರಾಜ್ಯದ ಹಿರಿಯ ನಾಯಕರೂ ಆಗಿರುವ ಡಿಕೆಶಿ ಅವರ ಆಗಮನದ ಸುದ್ದಿಯನ್ನು ಇನಾಂದಾರ ಅವರ ಬೆಂಬಲಿಗರಿಗೆ ತಿಳಿಸಿಲ್ಲ. ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಈಗ ಬಂದಿರುವ ಕೆಲವರು ಕಡೆಗಣಿಸುತ್ತಿದ್ದಾರೆ ಎಂಬ ಮಾತುಗಳು ಅಸಮಾಧಾನಗೊಂಡವರಲ್ಲಿ ಮಾರ್ದನಿಸುತ್ತಿವೆ.

2018 ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ನಾಯಕತ್ವವು ಡಿ. ಬಿ. ಇನಾಂದಾರ ಅವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿತ್ತು. ಪಕ್ಷದಲ್ಲಿ ಅಧಿಕಾರದ ಸವಿ ಉಂಡವರೇ ಅಂದು ವಿರೋಧ ಮಾಡಿದರು. ಅವರ ಸೋಲಿಗೂ ಕಾರಣರಾದರು ಎಂದು ಆರೋಪಿಸಿರುವ ಅವರು, ಮತ್ತೆ ಅಂಥವರಿಗೆ ಇನಾಮದಾರ ಅವರ ಗಮನಕ್ಕೆ ತರದೇ ಪಕ್ಷದಲ್ಲಿ ಸ್ಥಾನ ನೀಡಿದ್ದು ಎಷ್ಟು ಸರಿ ಎಂದು ಅಸಂತುಷ್ಟ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಅವರ ಮುಂದೆಯೇ   ಅಸಮಾಧಾನ ವ್ಯಕ್ತಪಡಿಸುವುದಾಗಿ ಘೋಷಿಸಿಕೊಂಡಿದ್ದಾರೆ.

ಅದಕ್ಕಾಗಿ ಬ್ಯಾನರ್ ಸಿದ್ಧಪಡಿಸಿಕೊಂಡಿದ್ದಾರೆ. ಅವಕಾಶ ಕೊಟ್ಟರೆ ಇಲ್ಲಿಯ ಕಾಂಗ್ರೆಸ್ ಪರಿಸ್ಥಿತಿಯನ್ನು ಕೆಪಿಸಿಸಿ ಅಧ್ಯಕ್ಷರ ಎದುರು ತೋಡಿಕೊಳ್ಳಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.