ಶಿಕ್ಷಕರಿಗೆ ಗುಂಡು, ತುಂಡಿನ ಪಾರ್ಟಿ! - Kittur


 ಶಿಕ್ಷಕರಿಗೆ ಗುಂಡು, ತುಂಡಿನ ಪಾರ್ಟಿ!

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ವಾಯವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಿಗದಿ ಮಾಡಲಾಗಿರುವ ಜೂ. 13 ನೇ ದಿನಾಂಕ ಸಮೀಪಿಸುತ್ತಿರುವುದರಿಂದ   ಅಭ್ಯರ್ಥಿಯೊಬ್ಬರ ನಿಕಟವರ್ತಿಯ ಆಮಂತ್ರಣದ ಮೇರೆಗೆ   ಇಲ್ಲಿನ ಹೋಟೆಲ್ ತುಂಬಿ ತುಳುಕುತ್ತಿದೆ. ಶಿಕ್ಷಕರಿಗೆ ಗುಂಡು ಸಮೇತ ಬಾಡೂಟ ಮಾಡಿಸುವ ಪ್ರಕರಣಗಳು ಎಗ್ಗಿಲ್ಲದೆ ಪಟ್ಟಣದ ಹೊರವಲಯದಲ್ಲಿರುವ ಹೋಟೆಲ್ ನಲ್ಲಿ ಸಾಗಿರುವ ವರದಿಗಳು ಬಂದಿವೆ.

ಈ ಬಾರಿಯೂ ಪುನರಾಯ್ಕೆ ಆಗುತ್ತಾರೆ ಎಂದು ವಿಶ್ವಾಸದಲ್ಲಿರುವ   ಅಭ್ಯರ್ಥಿಯೊಬ್ಬರ ಅನುಯಾಯಿಗಳ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಪಟ್ಟಣದ ಹೊರವಲಯದಲ್ಲಿರುವ ಹೋಟೆಲ್ ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. 

ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಅನೇಕ sಶಾಲೆಗಳ ಶಿಕ್ಷಕರು ಈ ಭರ್ಜರಿ ಪಾರ್ಟಿಯಲ್ಲಿ ತಮ್ಮ ದಾಖಲಾತಿ ಸಾರಿ ಹೇಳಿದರು. ಗುಂಡಿನ ಸಮೇತ ಬಾಯಿ ಚಪ್ಪರಿಸಿದರು. ಇದಕ್ಕಾಗಿಯೇ ಆ ಅಭ್ಯರ್ಥಿಯೊಬ್ಬರು   ಶಿಕ್ಷಕರೊಬ್ಬರನ್ನು  ನೇಮಿಸಿದ್ದರು. ಅವರೇ ಹೋಟೆಲ್ ಬಾಗಿಲಲ್ಲಿ ನಿಂತು ಸ್ವಾಗತಿಸುತ್ತಿದ್ದ ದೃಶ್ಯ ಕಂಡು ಬಂತು.

‘ಶನಿವಾರ ಮಧ್ಯಾಹ್ನ  ಶಾಲೆಗೆ ಬಿಡುವು ಆಗಿರುವುದರಿಂದ  ಶಿಕ್ಷಕರಿಗೂ ಬರಲು ಅನುಕೂಲವಾಗುತ್ತದೆಂದು ಅದೇ ದಿನ ಪಾರ್ಟಿಗೆ ಆಯೋಜನೆ ಮಾಡಿದ್ದಾರೆ' ಎಂಬ ಮಾತುಗಳು ಕೆಲವು ಶಿಕ್ಷಕರಿಂದ ಕೇಳಿ ಬಂದವು.

‘ಕಾರ್, ಬೈಕ್ ಗಳಲ್ಲಿ ಹೆಚ್ಚು  ಸಂಖ್ಯೆಯಲ್ಲಿ ಶಿಕ್ಷಕರು  ಹೋಟೆಲ್‍ಗೆ ಆಗಮಿಸಿದ್ದರು.  ಪರಿಚಿತರ ತಂಡ ಸ್ಥಳದಲ್ಲಿಯೇ ಕಟ್ಟಿಕೊಂಡು ಒಟ್ಟಿಗೆ ಟೇಬಲ್ ಸುತ್ತ ಕುಳಿತು ಗುಂಡು ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ಆ ತಂಡಗಳೇ ತಮಗೆ ಇಷ್ಟವಾದ ಊಟದ ಆರ್ಡರ್ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. 

ಪಾರ್ಟಿಯ ನೇತೃತ್ವ ವಹಿಸಿದವರು, ‘ನಿಮಗಿಷ್ಟವಾದ ಊಟದ ಆರ್ಡರ್ ಮಾಡಿ' ಎಂದು ಆಗಾಗ್ಗೆ    ಆಗಮಿಸಿ ಹೇಳುತ್ತಿರುವುದು ಕಂಡ ಬಂದಿತು.

ಯಾವ ತ್ಯಾಗವಾದರೂ ಮಾಡಿ  ‘ಈ ಅಭ್ಯರ್ಥಿ’ಯನ್ನು ಆಯ್ಕೆ ಮಾಡಲೇಬೇಕು ಎಂದು ಪಣತೊಟ್ಟಂತೆ ಕಂಡು ಬಂದರು.  ಅವರೇ ಗೆದ್ದು ಬಂದರೆ ಒಳ್ಳೆಯದು ಎಂಬ ಅಭಿಪ್ರಾಯಗಳೂ ಅವರ ಬೆಂಬಲಿಗರಿಂದ ವ್ಯಕ್ತವಾಗುತ್ತಿದ್ದವು. 

ಅನುಮತಿ ಇರಲಿಲ್ಲ

ಫ್ಯಾಮಿಲಿ ಹೋಟೆಲ್ ಎಂದು ನಾಮಫಲಕ ಹಾಕಿದ್ದರೂ ದೊಡ್ಡ ಹಾಲ್ ನಲ್ಲಿ ಶಿಕ್ಷಕರ ಈ ‘ಮದ್ಯಗೋಷ್ಟಿ' ನಡೆದಿದ್ದರಿಂದ ಕೆಲವು ಗ್ರಾಹಕರು ಮುಜುಗರ ಪಟ್ಟುಕೊಳ್ಳುವ ಸನ್ನಿವೇಶವೂ ಅಲ್ಲಿ ಸೃಷ್ಟಿಯಾಗಿತ್ತು. 

ಗ್ರಾಹಕರ ದೊಡ್ಡ ಗುಂಪೇ ಊಟಕ್ಕೆ ಬಂದಿದ್ದರಿಂದ ಊರಿಗೆ ತೆರಳುವ ಕೆಲವು ಪ್ರಯಾಣಿಕರು ಊಟದ ಸರಬರಾಜಿಗೆ ವಿಳಂಬವಾಗಿದ್ದರಿಂದ ಏರುಧ್ವನಿಯಲ್ಲಿ ಮಾತನಾಡಿದ ಪ್ರಸಂಗಗಳೂ ನಡೆದವು.

ಶಿಕ್ಷಕರ ದೊಡ್ಡ ಗುಂಪೇ ಒಂದೆಡೆ ನೆರೆದಿದ್ದರಿಂದ ಹೋಟೆಲ್ ಗಿಜಿಗಿಟ್ಟಿತ್ತು. ಸಂತೆಯ ಸ್ವರೂಪ ಅದು ಪಡೆದುಕೊಂಡಿತ್ತು. ಹೋಟೆಲ್ ಸಿಬ್ಬಂದಿಯ ಒಲವು ಕೂಡಾ ದೊಡ್ಡ ಗುಂಪಿನ ಗ್ರಾಹಕರ ಕಡೆಗೆ  ನೆಟ್ಟಿದ್ದು ಸಹಜವಾಗಿತ್ತು!

0/Post a Comment/Comments