625 ಅಂಕ ಪಡೆದ ಸ್ವಾತಿಗೆ ಸತ್ಕಾರ - Kittur


 625 ಅಂಕ ಪಡೆದ ಸ್ವಾತಿಗೆ ಸತ್ಕಾರ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಖಾನಾಪುರ ತಾಲೂಕಿನ ನಂದಗಡದ ಸಂಗೊಳ್ಳಿ  ರಾಯಣ್ಣ ಸ್ಮಾರಕ ವಸತಿ ಶಾಲೆಯಲ್ಲಿ ಓದಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ನಿಚ್ಚಣಕಿಯ ಸ್ವಾತಿ ಸುರೇಶ ತೋಲಗಿ ವಿದ್ಯಾರ್ಥಿನಿಯನ್ನು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಸ್. ಬಿ. ದಳವಾಯಿ ಶುಕ್ರವಾರ ಸತ್ಕರಿಸಿದರು. 

ಅನಂತರ ಮಾತನಾಡಿದ ಅವರು, ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿನಿ ಸ್ವಾತಿ 

ಆರ್ಥಿಕವಾಗಿ ಹಿಂದುಳಿದಿದ್ದರೂ ಛಲದಿಂದ ಓದಿ ಈ ಸಾಧನೆ ಮಾಡಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

ಹೆಣ್ಣು ಮಕ್ಕಳಿಗೆ ಆಶಾಕಿರಣವಾದ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಕಲ್ಪ ‘ಸಾಧನಾ ಶಿಕ್ಷಣ’ ಪಡೆಯಲು ಸ್ವಾತಿ ಅರ್ಹತೆ ಗಳಿಸಿಕೊಂಡಿದ್ದಾರೆ. ಪ್ರವೇಶ ಪರೀಕ್ಷೆ ಮತ್ತು  ತರಬೇತಿಯ ಮೂಲಕ ಆಯ್ಕೆಯಾದ ಈಕೆಗೆ ಪಿಯುಸಿ ಮತ್ತು ಬಿಎಸ್‍ಸಿ ಇಂಟಿಗ್ರೇಟೆಡ್ ಬಿಎಡ್ ತರಬೇತಿ ಕೂಡಾ ವಸತಿಯೊಂದಿಗೆ ಉಚಿತವಾಗಿ ಆರು ವರ್ಷಗಳವರೆಗೆ ರಾಷ್ಟ್ರೋತ್ಥಾನ  ಪರಿಷತ್ತು ಬೆಂಗಳೂರಿನಲ್ಲಿ ನೀಡಲಿದೆ. ಮೇ 25 ರಿಂದ ತರಗತಿಗಳು ಆರಂಭವಾಗಲಿವೆ ಎಂದು ಅವರು ಮಾಹಿತಿ ನೀಡಿದರು.

ಈ ಸಾಧನೆಗೆ ಕಾರಣರಾದ ನಂದಗಡದ ಸಂಗೊಳ್ಳಿ  ರಾಯಣ್ಣ ಸ್ಮಾರಕ ವಸತಿ ಶಾಲೆಯ ಪ್ರಾಚಾರ್ಯ ಮತ್ತು ಸಹಶಿಕ್ಷಕರನ್ನು ದಳವಾಯಿ ಅವರು ಅಭಿನಂದಿಸಿದರು.  

ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಚೇರಮನ್ ಎಂ. ಬಿ. ದಳವಾಯಿ, ಅಂಚೆ ಇಲಾಖೆಯ ಭೀಮಪ್ಪ  ಹಿತ್ತಲಮನಿ ಉಪಸ್ಥಿತರಿದ್ದರು.

*****

ಸ್ಮರಿಸಿ ಭಾವುಕಳಾದ ಸ್ವಾತಿ

ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡೆನು. ಬಟ್ಟೆ ಹೊಲಿಯುವ ಕೆಲಸ ಮಾಡುತ್ತ ತಂದೆಯ ಸ್ಥಾನವನ್ನೂ ತಾಯಿ ತುಂಬಿ ಕಷ್ಟದಿಂದ ನನ್ನ ಓದಿಸಿದಳು.

ಮಾರ್ಗದರ್ಶನ ಮಾಡಿ ವಿದ್ಯೆ ಕಲಿಸಿದ ಎಲ್ಲ ಗುರು ಹಿರಿಯರ ಪ್ರೋತ್ಸಾಹ ಮತ್ತು ನಿರಂತರ ಓದು  ಈ ಯಶಸ್ವಿಗೆ ಕಾರಣವಾಗಿದೆ. ನಂದಗಡದ ರಾಯಣ್ಣ ವಸತಿ ಶಾಲೆಯಲ್ಲಿ ಕಳೆದ ಆತ್ಮೀಯ ಕ್ಷಣಗಳನ್ನು ಜೀವನ ಪರ್ಯಂತ ಮರೆಯಲಾಗದು ಎಂದು ಸ್ವಾತಿ ಭಾವುಕಳಾಗಿ ನುಡಿದರು.


0/Post a Comment/Comments