ಹರಕೆ ಹೊತ್ತ ಶಾಸಕ ದೊಡ್ಡಗೌಡರ ಅಭಿಮಾನಿ - Kittur


 ದೊಡ್ಡಗೌಡರ ಮೇಲೆ ಅಭಿಮಾನ ಮೆರೆದ ಭಕ್ತ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಗ್ರಾಮಾಂತರ ಪ್ರದೇಶದಲ್ಲಿ ಈಗ ಜಾತ್ರೆಗಳದ್ದೇ ಸುಗ್ಗಿ. ದ್ಯಾಮವ್ವ, ದುರ್ಗವ್ವ, ವೀರಭದ್ರೇಶ್ವರ, ಮಡಿವಾಳೇಶ್ವರ, ಚನ್ನಬಸವೇಶ್ವರ, ರೇವಣಸಿದ್ದೇಶ್ವರ..ಹೀಗೆ ಈ ಜಾತ್ರೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಕೆಲವು ಜಾತ್ರೆಗಳಲ್ಲಿ ರಥೋತ್ಸವ ಪ್ರಮುಖ ಆಕರ್ಷಣೆ ಆಗಿರುತ್ತದೆ. ರಥಬೀದಿಯಲ್ಲಿ   ಭಕ್ತರು ತೇರನೆಳೆಯುತ್ತಾರೆ.   ಈ ಸಂಭ್ರಮವನ್ನು ಇಕ್ಕೆಲಗಳಲ್ಲಿ ನಿಂತು ಭಕ್ತಾದಿಗಳು ಕಣ್ತುಂಬಿಸಿಕೊಳ್ಳುತ್ತಾರೆ. ಜಯಘೋಷ   ಮಾಡಿ ಸಂಭ್ರಮಿಸುತ್ತಾರೆ. ಅಲ್ಲಿಯ ಉತ್ಸಾಹ ಮತ್ತು ಸಡಗರಗಳನ್ನು ಪದಗಳಲ್ಲಿ ಕಟ್ಟಿಕೊಡುವುದು ಕಠಿಣ.

ರಥ ಮೆಲ್ಲನೆ ಚಲಿಸಲು ಆರಂಭಿಸಿದರೆ ನಿಂತ ಭಕ್ತರು ಹಣ್ಣು, ಉತ್ತತ್ತಿ, ಬೆಂಡು, ಬೆತ್ತಾಸ ಮತ್ತು ದುಡ್ಡು ಎಸೆದು ಸಂಭ್ರಮಿಸುತ್ತಾರೆ.  ಎಸೆದ ಹಣ್ಣುಗಳನ್ನು ಹಿಡಿದು ಪ್ರಸಾದವಾಗಿ ಸ್ವೀಕರಿಸುತ್ತಾರೆ.  ಪರಸ್ಪರ ವಿತರಿಸಿ ಪುನೀತಭಾವದಲ್ಲಿ ಮಿಂದೇಳುತ್ತಾರೆ. 

ಬೈಲಹೊಂಗಲ  ತಾಲೂಕಿನ ಕುರಗುಂದ ಜಾತ್ರೆಯಲ್ಲಿ ನಡೆದಿದ್ದು ಮಾತ್ರ ವಿಶೇಷ ಘಟನೆ. ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅಭಿಮಾನಿಯೊಬ್ಬರು ಬಾಳೇಹಣ್ಣಿನ ಮೇಲೆ ‘2023ರ ಶಾಸಕರು ಎಂ. ಬಿ. ದೊಡ್ಡಗೌಡರ’ ಎಂದು ಬರೆದು ಎಳೆವ ತೇರಿಗೆ ಎಸೆದು ಹರಕೆ ಹೊತ್ತಿದ್ದಾರೆ.

ಶಾಸಕರ ಮೇಲಿನ ಭಕ್ತನೊಬ್ಬನ ಅಭಿಮಾನವು  ದೊಡ್ಡಗೌಡರ ಬೆಂಬಲಿಗರಲ್ಲಿ  ಉತ್ಸಾಹ ಇಮ್ಮಡಿಸಿದ್ದಂತೂ ಸತ್ಯ.

0/Post a Comment/Comments