‘ತುಳಿಯುವವರ ಮಧ್ಯ ಇರುತ್ತಾರೆ ಕಾಯುವವರು’ : ಸಮಾಜ ಸೇವಕ ಹಬೀಬ ಶಿಲೇದಾರ - Kittur


 ‘ತುಳಿಯುವವರ ಮಧ್ಯ ಇರುತ್ತಾರೆ ಕಾಯುವವರು’

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನಕಿತ್ತೂರು: ಕಷ್ಟಪಟ್ಟು ಜೀವನದಲ್ಲಿ ಮುಂದೆ ಬರಬೇಕು. ನೂರು ಜನ ತುಳಿಯುವವರು ಇದ್ದರೆ ಕಾಯುವವ ಒಬ್ಬ ಇದ್ದೇ ಇರುತ್ತಾರೆ ಎಂದು ಸಮಾಜ ಸೇವಕ ಹಬೀಬ ಶಿಲೇದಾರ ಅಭಿಪ್ರಾಯಪಟ್ಟರು. 

ತಾಲೂಕಿನ ಶಿವನೂರು ಗ್ರಾಮದ ಮೈದಾನದಲ್ಲಿ ಶಿಲೇದಾರ  ಅವರ  ನೇತೃತ್ವದಲ್ಲಿ ಆಯೋಜಿಸಲಾಗಿರುವ ‘ಸತೀಶಣ್ಣಾ ಟ್ರೋಫಿ' ಫುಲ್‍ಪಿಚ್ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. 

ಸಮಾಜಕ್ಕೆ ಒಳ್ಳೆಯದು ಆಗುವುದಾದರೆ ಸಹಾಯ ಮಾಡಲು ಸದಾ ಸಿದ್ದನಾಗಿದ್ದೇನೆ. ಶ್ರೀಮಂತ ಮನೆತನದಲ್ಲಿ ನಾನು ಜನಿಸಿಲ್ಲ.  ಬಡತನದ ಅರಿವು ಸಾಕಷ್ಟು ಇದೆ. ಬಡವರ ಕಷ್ಟಗಳು ಏನೆಂಬುದು ನನಗೆ ಚೆನ್ನಾಗಿ  ಗೊತ್ತಿದೆ ಎಂದರು.

ಚುನಾಯಿತ ಪ್ರತಿನಿಧಿ ನಾನಲ್ಲ. ಬಡವರು, ದೀನದಲಿತರು, ಬಡವಿದ್ಯಾರ್ಥಿಗಳಿಗೆ ಕೈಲಾದ ಸಹಾಯ ಮಾಡುವ ಸೇವಕ ನಾನು. ನಾಡಿಗೆ ಒಳ್ಳೆಯದು ಮಾಡುವುದರಿಂದ ಸಮಾಜ ಸೇವಕ ಎಂಬ ಪದವಿಯನ್ನು ಜನರೇ ನನಗೆ ನೀಡಿದ್ದಾರೆ ಎಂದು ಸ್ಮರಿಸಿದರು.

12 ನೆಯ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆ ಸಾರಿದರು. ಮಾನವ ಜಾತಿ ಒಂದೇ ಎಂದರು. ಎಲ್ಲ ದಾರ್ಶನಿಕರು ಮತ್ತು ಪವಿತ್ರ ಧರ್ಮಗ್ರಂಥಗಳು ಮಾನವನ ಏಳಿಗೆ ಮತ್ತು ಶಾಂತಿಯನ್ನು ಸಾರಿ ಹೇಳಿವೆ ಎಂದು ಪ್ರತಿಪಾದಿಸಿದರು.

ಯುವಕರು ಜಾಗೃತರಾಗಬೇಕು. ಬಡತನದಲ್ಲಿ ಕಷ್ಟಪಟ್ಟು  ಪಾಲಕರು ನಿಮ್ಮನ್ನು ವಿದ್ಯಾವಂತರನ್ನಾಗಿ ಮಾಡಿರುತ್ತಾರೆ. ಬಹಳಷ್ಟು ಕನಸುಗಳನ್ನೂ ನಿಮ್ಮ ಬಗ್ಗೆ ಕಟ್ಟ್ಟಿಕೊಂಡಿರುತ್ತಾರೆ. ಅವರ ಕನಸು ನನಸು ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಹೆಚ್ಚಾಗಿರುತ್ತದೆ ಎಂದು ಕಿವಿ ಮಾತು ಹೇಳಿದರು.

ಅಂತಿಮ ಪಂದ್ಯಕ್ಕೆ ರಾಹುಲ್

ಫೈನಲ್ ಪಂದ್ಯಾವಳಿಗೆ ರಾಹುಲ್ ಜಾರಕಿಹೊಳಿ ಅವರು ಬರುತ್ತಾರೆ. ಕ್ರೀಡೆ, ಸಮಾಜ, ಕಲೆ ಮೇಲೆ ಅವರು ಬಹಳಷ್ಟು ಆಸಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.

ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. 51 ಸಾವಿರ ನಗದು ಬಹುಮಾನವನ್ನು ಹಬೀಬ ಶಿಲೇದಾರ ಘೋಷಿಸಿದ್ದಾರೆ. ವಿನಾಯಕ ಪಾಟೀಲ ದ್ವಿತೀಯ ಬಹುಮಾನ ರೂ. 25 ಸಾವಿರ ನೀಡಲಿದ್ದಾರೆ.

ಮಾರುತಿ ನಾಯ್ಕರ, ಕುಮಾರ ಹಿರೇಮಠ, ಮಡಿವಾಳಿ ನಾಯ್ಕರ, ಶಿವಯೋಗಿ ಹಿರೇಮಠ, ನವೀನ ಚವ್ಹಾಣ, ಸಂತೋಷ ಇದ್ದರು.

-----------

ಸಮಾಜ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸತೀಶಣ್ಣಾ ಜಾರಕಿಹೊಳಿ ಅವರು ಸಹಾಯ ಮಾಡುತ್ತ ಬಂದಿದ್ದಾರೆ. ಉತ್ತಮ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಎಲ್ಲರಿಗೂ ಸಹಾಯ ಮಾಡುವ ಗುಣ ಅವರಲ್ಲಿದೆ 

ಹಬೀಬ ಶಿಲೇದಾರ, ಸಮಾಜಸೇವಕರು

0/Post a Comment/Comments