ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತಾಲೂಕಿನ ತಿಗಡೊಳ್ಳಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಕನ್ನಡ ಭಾಷೆ ಅರಿಯದ ಪ್ರಬಂಧಕ ವರ್ಗಾವಣೆಯಾಗಿ ಬಂದಿದ್ದು, ಗ್ರಾಹಕರು ಪರದಾಡುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಕನ್ನಡೇತರ ಭಾಷೆ ಅರಿಯದ ಗ್ರಾಮಸ್ಥರಿಗೆ ಪ್ರಬಂಧಕ ಆಡುವ ಭಾಷೆ ಅರ್ಥವಾಗುತ್ತಿಲ್ಲ. ಹೀಗಾಗಿ ನಿತ್ಯದ ಬ್ಯಾಂಕಿನ ವ್ಯವಹಾರಕ್ಕೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ.
ಇದನ್ನು ಅರಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆಯು, ಕೂಡಲೇ ಈ ಪ್ರಬಂಧಕರನ್ನು ಬೇರೆಡೆ ವರ್ಗಾವಣೆ ಮಾಡಬೇಕು, ಇಲ್ಲದಿದ್ದರೆ ಅವರು ಕನ್ನಡ ಭಾಷೆ ಕಲಿತ ನಂತರ ಇಲ್ಲಿ ಕೆಲಸ ನಿರ್ವಹಿಸಲು ಕೊಡಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಯನ್ನು ಒತ್ತಾಯಿಸಿದೆ.
ಕನ್ನಡ ಭಾಷೆ ಮತ್ತು ನಿತ್ಯದ ವ್ಯವಹಾರಗಳಲ್ಲಿ ಕನ್ನಡ ಭಾಷೆ ಬಳಸಲು ರಾಜ್ಯ ಸರ್ಕಾರವು ಆದ್ಯತೆ ನೀಡಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನವಿದೆ. ನಿತ್ಯದ ಅದರಲ್ಲೂ ಹಣಕಾಸು ಸಂಸ್ಥೆಗಳಲ್ಲಿ ಕನ್ನಡೇತರ ಅಧಿಕಾರಿಯನ್ನು ನಿಯೋಜನೆ ಮಾಡಿ ಗ್ರಾಹಕರಿಗೆ ತೊಂದರೆ ಮಾಡುತ್ತಿರುವುದು ಯಾವ ನ್ಯಾಯ ಎಂದು ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸನ್ನವರ ಪ್ರಶ್ನಿಸಿದ್ದಾರೆ.
ತಕ್ಷಣ ಈ ಪ್ರಬಂಧಕರನ್ನು ಬೇರೆಡೆ ನಿಯೋಜನೆ ಮಾಡಬೇಕು. ಕನ್ನಡ ಬಲ್ಲವರನ್ನು ಈ ಹುದ್ದೆಗೆ ತರಬೇಕು. ಇಲ್ಲದಿದ್ದರೆ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಯಣ್ಣ ಯುವ ಸಂಘಟನೆ ಸದಸ್ಯ ಕಲ್ಮೇಶ ಬೋಗೂರ ಎಚ್ಚರಿಕೆ ನೀಡಿದ್ದಾರೆ.
ತಿಗಡೊಳ್ಳಿ ಶಾಖೆ ಪ್ರಬಂಧಕರ ಗ್ರಾಹಕ ವಿರೋಧಿ ಧೋರಣೆ ಖಂಡಿಸಿ ಕಿತ್ತೂರು ಸಿಂಡಿಕೇಟ್ ಬ್ಯಾಂಕ್ ಶಾಖೆ ಹಿರಿಯ ಪ್ರಬಂಧಕರಿಗೂ ಬುಧವಾರ ಮನವಿ ಸಲ್ಲಿಸಲಾಯಿತು.
ಸಂಘಟನೆ ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಕಾರ್ಯದರ್ಶಿ ವಿನಾಯಕ ಗಾಣಿಗಿ, ಸದಸ್ಯರಾದ ಮಹಾಂತೇಶ ಮಡಿವಾಳರ, ಸಂಜೀವ ಹಾರುಗೊಪ್ಪ, ಚನಬಸಪ್ಪ ಹಂಚಿನಮನಿ ಉಪಸ್ಥಿತರಿದ್ದರು.