ಪುನೀತ್ ಜನ್ಮದಿನ: ಅನ್ನದಾನ, ನೇತ್ರದಾನ - Kittur


 ಪುನೀತ್ ಜನ್ಮದಿನ: ಅನ್ನದಾನ, ನೇತ್ರದಾನ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ ಕಿತ್ತೂರಿನ ಶಿವಶಕ್ತಿ ಟಾಕೀಸ್ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ 85 ಜನ ಪುನೀತ್ ಅಭಿಮಾನಿಗಳು ನೇತ್ರದಾನಕ್ಕಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ಅವರ ಮೇಲಿನ ಅಭಿಮಾನವನ್ನು ಮೆರೆದರು.

ಪುನೀತ್ ಜನ್ಮದಿನ ಆಚರಣೆ ಹಾಗೂ ಶಿವಶಕ್ತಿ ಚಿತ್ರಮಂದಿರಲ್ಲಿ ಅವರ ಅಭಿನಯದ ಜೇಮ್ಸ್ ಚಲನಚಿತ್ರ ಬಿಡುಗಡೆ ಸುದ್ದಿ ತಿಳಿದಿದ್ದ ಅಭಿಮಾನಿಗಳು ಟಾಕೀಸ್ ಆವರಣಕ್ಕೆ ಅಧಿಕ ಸಂಖ್ಯೆಯಲ್ಲಿ ಹರಿದುಬಂದರು.

ಸ್ವಯಂ ಪ್ರೇರಿತರಾಗಿ ಯುವಕರು ಮತ್ತು ಮಧ್ಯ ವಯಸ್ಕರು ನೇತ್ರದಾನದ ವಾಗ್ದಾನ ಮಾಡಿದರು. ಒಟ್ಟು 85 ಪುನೀತ್ ಅಭಿಮಾನಿಗಳು ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಅನ್ನಪೂರ್ಣ ಬೆಟಗೇರಿ, ನೇತ್ರತಜ್ಞ ಡಾ. ಪ್ರಭಾಕರ ಲಿಂಗದಾಳ ತಿಳಿಸಿದರು.

ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮಹೇಶ್ ಎ. ಸಿದ್ದೇಶ್ ಎಸ್, ಷಣ್ಮುಖ ಪೂಜೇರ ನೋಂದಣಿ ಕಾರ್ಯ ನೆರವೇರಿಸಿದರು.

ಅಭಿಮಾನಿಗಳ ಜೈಘೋಷ

ಪುನೀತ್ ಅಭಿನಯದ ಜೇಮ್ಸ್ ಚಲನಚಿತ್ರವು ಶಿವಶಕ್ತಿ ಸಿನಿಮಾ ಮಂದಿರದಲ್ಲಿ ಗುರುವಾರ ಬಿಡುಗಡೆ ಆಯಿತು. ಇದೇ ಸಂದರ್ಭದಲ್ಲಿ ಪುನೀತ್ ಜನ್ಮದಿನ ಆಚರಣೆ ಮತ್ತು ಅನ್ನಪ್ರಸಾದವನ್ನು ಅಭಿಮಾನಿ ಬಳಗ ಏರ್ಪಡಿಸಿತ್ತು. ಥಿಯೇಟರ್ ಎದುರು ಕಿಕ್ಕಿರಿದು ಜನ ಸೇರಿದ್ದರು. ಪುನೀತ್‍ಗೆ ಜೈಘೋಷ ಹಾಕಿ ಸಂಭ್ರಮಪಟ್ಟರು. ಅಧಿಕ ಎತ್ತರದ ಪುನೀತ್ ಅಭಿನಯದ ಜೇಮ್ಸ್ ಚಿತ್ರದ ಕಟೌಟ್‍ಗೆ ಅಭಿಮಾನಿಗಳು ತಳಿರು,ತೋರಣ ಕಟ್ಟಿ ಸಿಂಗರಿಸಿ ಅಂದಗೊಳಿಸಿದ್ದರು. ಗುರುವಾರ ಪೇಟೆ ಚನ್ನಮ್ಮ ವೃತ್ತದಿಂದ ಸಿನಿಮಾ ಮಂದಿರದ ಹಾದಿಯಲ್ಲಿ ಪುನೀತ್ ಅಭಿನಯದ ಎಲ್ಲ 30 ಚಿತ್ರಗಳ ಪೋಸ್ಟರ್‍ಗಳನ್ನು  ಪ್ರದರ್ಶನ ಮಾಡಲಾಗಿತ್ತು.

ತಾಲೂಕಿನ ಮಲ್ಲಾಪುರ ಗ್ರಾಮದ ಸೈನಿಕ ಸಂಜೀವ ಶಿವಲಿಂಗನವರ ಅವರಿಂದ ಕೇಕ್ ಕಟ್ ಮಾಡಿಸಿ ಅಭಿಮಾನಿ ಬಳಗದವರು ಪುನೀತ್ ಜನ್ಮದಿನದ ಆಚರಣೆಯನ್ನು ಸಂಭ್ರಮಿಸಿದರು. ಬಂದವರೆಲ್ಲರಿಗೂ ಅನ್ನಪ್ರಸಾದ ಹಾಗೂ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

ಪಟ್ಟಣ ಪಂಚಾಯ್ತಿ ಸದಸ್ಯರಾದ ನಾಗರಾಜ ಅಸುಂಡಿ, ಮಂಜುನಾಥ ತೊಟ್ಟಿಲಮನಿ, ಅಭಿಮಾನಿ ಬಳಗದ ಮುಖಂಡರಾದ ಮಹಾಂತೇಶ ಕರಬಸನ್ನವರ, ಮಹೇಶ ಮಲಶೆಟ್ಟಿ ಉದಯ ಬೆಳವಡಿ, ಮಂಜುನಾಥ ಜಾಂಗಟಿ, ಮಹಾಂತೇಶ ಗಡೆಣ್ಣವರ, ಸಂತೋಷ ಕಟ್ಟಿಮನಿ, ವಿನಾಯಕ ಗಾಣಿಗಿ, ನಾಗರಾಜ ಚಿನಗುಡಿ, ಶಂಕರ ಕಂಬಾರ, ವಿನೋದ ಚಿನಗುಡಿ, ಪ್ರಮೋದ ಚಿನಗುಡಿ, ಗೋಪಿನಾಥ ರಾವಳ, ಬಸವರಾಜ ಪಾಟೀಲ, ಚೇತನ ಸರಪಳಿ, ಸಲೀಂ ತಾಮಟಗಾರ, ಅಭಿμÉೀಕ ಕಟ್ಟಿಮನಿ, ನಾಗಪ್ಪ ಪೂಜೇರ ಉಪಸ್ಥಿತರಿದ್ದರು.