ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ನೂತನ ಕಿತ್ತೂರು ತಾಲೂಕಿಗೆ ಮಂಜೂರಾದ ಮಿನಿ ವಿಧಾನಸೌಧ ಕಟ್ಟಡ ಪೂರ್ಣಗೊಂಡು ನಿಂತಿದ್ದರೂ ಅದನ್ನು ಉದ್ಘಾಟಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಕೂಡಲೇ ಹೊಸ ಕಟ್ಟಡ ಉದ್ಘಾಟಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನೇಗಿಲಯೋಗಿ ಸುರಕ್ಷಾ ರೈತ ಸಂಘಟನೆ ಅಧ್ಯಕ್ಷ ಧರ್ಮರಾಜ ಗೌಡರ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಆಗ್ರ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸೌಧ ನಿರ್ಮಾಣವಾಗಿ 5 ತಿಂಗಳು ಗತಿಸುತ್ತ ಬಂದಿದೆ. ಸ್ಥಳಾಂತರಕ್ಕೆ ಮುಹೂರ್ತ ಇನ್ನೂ ಏಕೆ ನಿಗದಿಯಾಗುತ್ತಿಲ್ಲ ಎಂದು ಕೇಳಿದರು.
ವಿಶೇಷ ತಹಶೀಲ್ದಾರ್ ಕಟ್ಟಡದಲ್ಲಿ ನೂತನ ತಹಶೀಲ್ದಾರ್ ಕಚೇರಿ ಪ್ರಾರಂಭಿಸಲಾಗಿದೆ. ಮಳೆಗಾಲದಲ್ಲಿ ಅದು ಸೋರುತ್ತದೆ. ಪ್ರಮುಖ ಕಂದಾಯ ದಾಖಲೆಗಳನ್ನು ಸೋರುವ ಕಟ್ಟಡದಲ್ಲಿ ಅಧಿಕಾರಿಗಳು ಸಂರಕ್ಷಿಸಬೇಕಾಗಿದೆ. ಪರ್ಯಾಯ ದಾರಿ ಇರಲಿಲ್ಲ. ಹೇಗೋ ಪರಿಸ್ಥಿತಿ ನಿಭಾಯಿಸಿದರು. ಆದರೆ, ಮಿನಿ ವಿಧಾನಸೌಧ ನಿರ್ಮಾಣಗೊಂಡಿದ್ದರೂ ಮತ್ತಷ್ಟು ಸಮಯ ವಿಳಂಬ ಮಾಡುವುದಿಲ್ಲ ಸರಿಯಲ್ಲ ಎಂದು ಹೇಳಿದರು.
ಬರುವ 15 ದಿನಗಳೊಳಗಾಗಿ ಪೂರ್ಣಗೊಂಡು ನಿಂತಿರುವ ಮಿನಿ ವಿಧಾನಸೌಧಕ್ಕೆ ತಾಲೂಕಿನಲ್ಲಿರುವ ಎಲ್ಲ ಕಚೇರಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಾಂತರ ಮಾಡಬೇಕು. ಇದೇ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ಈ ಭಾಗದ ನೂರಾರು ರೈತರು, ಸಾರ್ವಜನಿಕರ ಜೊತೆಗೂಡಿ ಹೋರಾಟ ಮಾಡಬೇಕಾದೀತು ಎಂದು ಗುಡುಗಿದರು.
ನೂತನ ಕಟ್ಟಡಕ್ಕೆ ಕಚೇರಿಗಳು ಸ್ಥಳಾಂತರಗೊಂಡರೆ ಒಂದೇ ಸೂರಿನಡಿ ಹಲವು ಇಲಾಖೆಗಳ ಸವಲತ್ತು ಜನರಿಗೆ ದೊರಕುತ್ತದೆ. ಕಚೇರಿಯಿಂದ ಕಚೇರಿಗೆ ಅಲೆದಾಡುವುದೂ ತಪ್ಪಲಿದೆ. ಮಿನಿ ವಿಧಾನಸೌಧದ ಸಮೀಪವೇ ಬಸ್ ನಿಲ್ದಾಣವಿದೆ. ಹಳ್ಳಿಗಳಿಂದ ಆಗಮಿಸುವ ಸಾರ್ವಜನಿಕರಿಗೆ ಸಮಯ ಮತ್ತು ದುಡ್ಡಿನ ಉಳಿತಾಯವಾಗುತ್ತದೆ ಎಂದು ಅವರು ನುಡಿದರು.
ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಹೊಸ ತಾಲೂಕು ರಚನೆಯಾಗಿ ಏಳು ವರ್ಷ ಗತಿಸಿವೆ. ಇಲ್ಲಿರುವ ತಾಲೂಕು ಮಟ್ಟದ ಕಚೇರಿ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಮೀನ, ಮೇಷ ಎಣಿಸುತ್ತಿದೆ. ಇದರಿಂದಾಗಿ ಜನರ ಹತ್ತಿರಕ್ಕೆ ಆಡಳಿತ ನೀಡುವ ಮೂಲ ಉದ್ದೇಶವೇ ಇಲ್ಲಿ ವಿಫಲಗೊಂಡಿದೆ ಎಂದು ಆರೋಪಿಸಿದರು.
ಸಿದ್ಧಗೊಂಡಿರುವ ಹೊಸ ಕಟ್ಟಡಕ್ಕೆ ಎಲ್ಲ ಕಚೇರಿಗಳನ್ನು ಸ್ಥಳಾಂತರ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದರು.
ಖಾನಾಪುರ ತಾಲೂಕು ಘಟಕದ ಅಧ್ಯಕ್ಷ ರುದ್ರಗೌಡ ಪಾಟೀಲ ಮಾತನಾಡಿದರು. ಮುಖಂಡರಾದ ಮಲ್ಲಪ್ಪ ಭಂಗಿ, ಸಂದೀಪ ಪಾಟೀಲ, ಸಲಹೆಗಾರ ಗಣೇಶ ಜಾಧವ ಇದ್ದರು.
Post a Comment