ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: 90 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಸತ್ಯಕತೆ ಆಧರಿಸಿದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಣೆಗೆ ಮಾ. 15 ರಂದು ಸಂಜೆ ಬಿಜೆಪಿ ಸಚಿವರು, ಶಾಸಕರು ಮಂತ್ರಿ ಮಹಲ್‍ನಲ್ಲಿರುವ ಥಿಯೇಟರ್‍ಗೆ ತೆರಳಲಿದ್ದಾರೆ. 'ನೀವೂ ಬರಬೇಕು' ಎಂದು ವಿರೋಧ ಪಕ್ಷ ಕಾಂಗ್ರೆಸ್, ಜೆಡಿಎಸ್ ಪಕ್ಷದ ಸದಸ್ಯರಿಗೂ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಮೌಖಿಕ ಆಮಂತ್ರಣ ಕೊಟ್ಟಿದ್ದಾರೆ.
'ಅವರೂ ಹೋಗ್ತಾರಾ..,' ಗೊತ್ತಿಲ್ಲ ಎನ್ನುತ್ತಿವೆ ವರದಿಗಳು. ಹೋದರೂ ಹೋಗಬಹುದು ಎನ್ನುತ್ತಾರೆ ಮತ್ತೆ ಕೆಲವರು.
ಈ ಸಿನಿಮಾ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಶೇ 100 ರಷ್ಟು ತೆರಿಗೆ ವಿನಾಯಿತಿ ಘೋಷಿಸಿವೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಹಾಗೂ ವಲಸೆಯ ನೈಜ ಕತೆಯಾಧಾರಿತ ಚಿತ್ರವನ್ನು ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಅನುಪಮ್ ಖೇರ್, ದರ್ಶನಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಇತರರು ಮನೋಜ್ಞ ಅಭಿನಯ ನೀಡಿದ್ದಾರೆ.
'ತುಟಿ ಮಿಟುಕದ ಬಾಲಿವುಡ್'
'ದೇಶಕ್ಕೆ ದೇಶವೇ ಸಿನಿಮಾವನ್ನು ಕೊಂಡಾಡುತ್ತಿದೆ. ಬಾಕ್ಸ್ ಆಫೀಸಿನಲ್ಲಿ ಹೆಚ್ಚು ಗಳಿಕೆ ಮಾಡಿದೆ. ಕೊರೋನಾ ನಂತರದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾವಿದು ಎನ್ನುವ ಹೆಗ್ಗಳಿಕೆಗೂ ಚಿತ್ರ ಪಾತ್ರವಾಗಿದೆ. ಆದರೂ, ಬಾಲಿವುಡ್ ಮೌನ ತಾಳಿದೆ' ಎಂದು ನಟಿ ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಾಲಿವುಡ್‍ನ ಕೆಲವರಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಇಂತಹ ಚಿತ್ರಗಳ ಬಗ್ಗೆ ಅವರಿಗೆ ಯಾವಾಗಲೂ ತಾತ್ಸಾರ ಎಂದೂ ಅವರು ಹೇಳಿಕೊಂಡಿದ್ದಾರೆ. ಇಂತಹ ಚಿತ್ರಗಳನ್ನು ಎಲ್ಲರಿಗೂ ತಲುಪಿಸಲು ಬಾಲಿವುಡ್ ಏಕೆ ಯೋಚಿಸುತ್ತಿಲ್ಲ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ ಎನ್ನಲಾಗಿದೆ.
Post a Comment