ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ‘ಕಿತ್ತೂರು ತಾಲ್ಲೂಕು ಕಚೇರಿ ನೌಕರರೊಬ್ಬರ ಮೇಲೆ ತಪ್ಪು ಗ್ರಹಿಕೆಯಿಂದ ಲಂಚದ ಬೇಡಿಕೆ ಇಟ್ಟಿರುವ ಆರೋಪ ಮಾಡಲಾಗಿತ್ತು. ತಪ್ಪಿನ ಅರಿವಾಗಿದ್ದರಿಂದ ಲಂಚದ ಆರೋಪದ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದೇನೆ' ಎಂದು ಹೊರ ರಾಜ್ಯ ಮೂಲದ ಉದ್ಯಮಿಯೊಬ್ಬರು ಲಿಖಿತ ಹೇಳಿಕೆ ನೀಡಿದ್ದಾರೆ.
‘ತಾಲೂಕಿನ ಹಳ್ಳಿ ವ್ಯಾಪ್ತಿಯಲ್ಲಿ ಚಿಕ್ಕ ಕೈಗಾರಿಕೆ ತೆರೆಯಲು 'ಕೈಗಾರಿಕೆ ಉದ್ದೇಶದ ಬಿನ್ ಶೇತ್ಕಿ' ಮಾಡಿಸಲು ಈ ನೌಕರರು ರೂ. 5.30 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದೆ. ಪರಿಶೀಲನೆ ಮಾಡಿ ನೋಡಿದಾಗ ಇದು ತಪ್ಪಾಗಿದೆಯೆಂದು ನನಗೆ ಮನವರಿಕೆ ಆಯಿತು' ಎಂದು ತಹಶೀಲ್ದರ್ ಅವರಿಗೆ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
‘ಕೃಷಿ ಭೂಮಿಯನ್ನು ಬಿನ್ ಶೇತ್ಕಿಯಾಗಿ ಪರಿವರ್ತಿಸಿಕೊಳ್ಳಲು ತಲಾ ಎಕರೆಗೆ ರೂ. 35 ಸಾವಿರದಿಂದ 40 ಸಾವಿರದವರೆಗೆ ಭೂ ಪರಿವರ್ತನಾ ಶುಲ್ಕ ಇರುವುದು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರ ಮಾಡಿದಾಗ ಗೊತ್ತಾಯಿತು. 13 ಎಕರೆಗಿಂತ ಹೆಚ್ಚಾಗಿರುವ ಭೂಮಿ ಪರಿವರ್ತನೆ ಮಾಡಿಕೊಳ್ಳಲು ರೂ. 5.30 ಲಕ್ಷ ಶುಲ್ಕ ತಗಲುತ್ತದೆ ಎಂದು ತಿಳಿದುಬಂತು. ತಪ್ಪು ತಿಳಿವಳಿಕೆಯಿಂದ ನೀಡಿದ ದೂರನ್ನು ವಾಪಸು ಪಡೆದುಕೊಂಡಿದ್ದೇನೆ' ಎಂದು ಉದ್ಯಮಿಯು ಪತ್ರದಲ್ಲಿ ಸ್ಪಷ್ಪಪಡಿಸಿದ್ದಾರೆ.
‘ನೌಕರರ ಮೇಲೆ ಮಾಡಿರುವ ಆರೋಪಗಳನ್ನು ಪರಿಗಣಿಸಬಾರದು' ಎಂದೂ ಅವರು ವಿನಂತಿ ಮಾಡಿಕೊಂಡಿದ್ದಾರೆ. ಈ ರೀತಿ ಉದ್ಯಮಿ ಪತ್ರ ಬರೆದುಕೊಟ್ಟಿರುವ ಬಗ್ಗೆಯೂ ಕಂದಾಯ ಇಲಾಖೆ ಮೂಲಗಳು ಖಚಿತ ಪಡಿಸಿವೆ.
Post a Comment