ಚಿಕ್ಕನಂದಿಹಳ್ಳಿಯಿಂದ ಕಕ್ಕೇರಿ ದೇವಸ್ಥಾನಕ್ಕೆ ಪಾದಯಾತ್ರೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ನೇಗಿಲಯೋಗಿ ಸುರಕ್ಷಾ ರೈತ ಸಂಘಟನೆ ವತಿಯಿಂದ ತಾಲ್ಲೂಕಿನ ಚಿಕ್ಕನಂದಿಹಳ್ಳಿಯ ಬಸವೇಶ್ವರ ದೇವಸ್ಥಾನದಿಂದ ಖಾನಾಪುರ ತಾಲ್ಲೂಕಿನ ಕಕ್ಕೇರಿ ಬಿಷ್ಟಮ್ಮದೇವಿ ದೇವಸ್ಥಾನದವರೆಗೆ ನೂರಾರು ರೈತರು ಶುಕ್ರವಾರ ಕಿತ್ತೂರು ಮಾರ್ಗವಾಗಿ ಪಾದಯಾತ್ರೆ ಬೆಳೆಸಿದರು.
ಮುಂಜಾನೆ 8 ಗಂಟೆಗೆ ಚಿಕ್ಕನಂದಿಹಳ್ಳಿ ಬಸವೇಶ್ವರ ದೇವಸ್ಥಾನದಿಂದ ಹೊರಟ ಯಾತ್ರೆಯ 9.30ಕ್ಕೆ ಕಿತ್ತೂರಿಗೆ ಆಗಮಿಸಿತು. ಧರ್ಮರಾಜ ಗೌಡರ ನೇತೃತ್ವದಲ್ಲಿ ನೂರಾರು ರೈತರು, ರೈತ ಮಹಿಳೆಯರು ಹೆಜ್ಜೆ ಹಾಕಿದರು.
ಧರ್ಮರಾಜ ಗೌಡರ ಮಾತನಾಡಿ, ದೇಶವನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದ ಕೊರೊನಾ ದೂರಾಗಬೇಕು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಕಾಲಿಕ ಮಳೆಯಾಗಿ ಉತ್ತಮ ಬೆಳೆ ಬರಲಿ. ರೈತಕುಲ ಸಂತೋಷದಿಂದ ಇರಬೇಕು ಎಂದು ಪ್ರಾರ್ಥಿಸಿಕೊಂಡು ಚಿಕ್ಕನಂದಿಹಳ್ಳಿಯಿಂದ ಕಕ್ಕೇರಿ ವರೆಗೆ ಸುಮಾರು 30 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೋಡಿಹಳ್ಳಿ ರೈತಸಂಘ ಬಣದ ಮಂಜುಳಾ ಪೂಜೇರ ಮಾತನಾಡಿ, ರೈತರಲ್ಲಿ ಆ ಬಣ, ಈ ಬಣವಿಲ್ಲ. ರೈತರದು ಒಂದೇ ಬಣ. ರೈತರಿಗೆ ಬಣ ಮುಖ್ಯವಲ್ಲ. ಅವರ ಏಳ್ಗೆ ಮುಖ್ಯವಾಗಿದೆ ಎಂದರು.
ಅನಂತರ ಬೈಲೂರು, ಹಿಡಕಲ್ ಮಾರ್ಗವಾಗಿ ಕಕ್ಕೇರಿ ಕಡೆಗೆ ಪಾದಯಾತ್ರೆ ಸಾಗಿತು.
ಮುಖಂಡರಾದ ಬಿ. ಎಂ. ಚಿಕ್ಕನಗೌಡರ, ಬಸನಗೌಡ ಪಾಟೀಲ, ಮಹಾಂತೇಶ ಗೌರಿ, ಈರಣ್ಣ ಹುಬ್ಬಳ್ಳಿ, ಸಹನಾ ಹಂಚಗಿ, ಈರಣ್ಣ ಅಂಗಡಿ, ಆನಂದ ಬೇವಿನ, ಶಿವಪ್ಪ ನೇಗಿನಹಾಳ, ರುದ್ರಗೌಡ ಪಾಟೀಲ, ಅದೃಶ್ಯ ಪಾಲ್ಗೊಂಡಿದ್ದರು.
Post a Comment