ಪ್ರೇಕ್ಷಕನ ಮೇಲೆ ನಾಟಕದ ಪ್ರಭಾವ ಗಾಢ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪ್ರೇಕ್ಷಕನ ಮೇಲೆ ಗಾಢ ಪ್ರಭಾವ ಬೀರುವ ನಾಟಕ ಕಲೆ ಶಿಕ್ಷಣದ ಒಂದು ಭಾಗವಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ. ಶ್ರೀಕಾಂತ ದಳವಾಯಿ ಅಭಿಪ್ರಾಯಪಟ್ಟರು.
ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಫೆ. 25 ರಿಂದ 27 ರವರೆಗೆ ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ‘ಶಿವಸಂಚಾರ’ ತಂಡದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ನಾಟಕ ಪ್ರದರ್ಶನಗಳು ಕಡಿಮೆಯಾಗುತ್ತಿವೆ. ಅವುಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಮತ್ತು ಬೆಳೆಸಬೇಕು ಎಂದು ಹೇಳಿದ ಅವರು, ನೋಡುಗರ ಸಂಖ್ಯೆ ಮತ್ತು ಅವರ ಪ್ರತಿಕ್ರಿಯೆಯು ನಾಟಕಗಳ ಯಶಸ್ವಿ ಪ್ರದರ್ಶನಕ್ಕೆ ಪ್ರಮುಖ ಕಾರಣವಾಗುತ್ತದೆ ಎಂದು ವಿವರಿಸಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಪ್ರಸ್ತುತ ತಂತ್ರಜ್ಞಾನದ ಯುಗದಲ್ಲಿರುವ ನಾಗರಿಕರು ನಾಟಕಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಗ್ರಾಮಾಂತರ ಪ್ರದೇಶದಲ್ಲಿ ಹತ್ತಾರು ಯುವಕರು ಸೇರಿ ಹಬ್ಬ- ಜಾತ್ರೆ ಸಂದರ್ಭದಲ್ಲಿ ನಾಟಕ ಕಲಿತು ಪ್ರದರ್ಶನ ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡರು.
ಕಲೆಯ ಜೊತೆಗೆ ಸಾಮಾಜಿಕ ಅರಿವು ಮೂಡಿಸುವ ಕಲಾವಿದರನ್ನು ಬೆಂಬಲಿಸುವ ಮತ್ತು ಬೆಳೆಸುವ ಕೆಲಸ ಸಮಾಜದಿಂದ ಆಗಬೇಕು ಎಂದು ಅವರು ಆಶಿಸಿದರು.
ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ವೈಚಾರಿಕ ಸ್ವಾಮೀಜಿಗಳಾಗಿರುವ ಡಾ. ಪಂಡಿತಾರಾಧ್ಯ ಶಿವಾಚಾರ್ಯರು ನಾಟಕ ಪರಂಪರೆ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಕೇವಲ ಮನರಂಜನೆಗಾಗಿ ಈ ಕಾರ್ಯವನ್ನು ಅವರು ಮಾಡುತ್ತಿಲ್ಲ. ಕಲೆಯ ಜೊತೆಗೆ ಕಲಾವಿದರ ಬೆಳೆಸುವ ಆಶಯ ಅವರಲ್ಲಿದೆ ಎಂದರು.
ನಾಟಕ ನೋಡುವಾಗಿನ ಸಂತೋಷ ಸಿನಿಮಾ ಮತ್ತು ಕಿರುತೆರೆ ಚಿತ್ರ ವೀಕ್ಷಿಸುವಾಗ ದೊರೆಯುವುದಿಲ್ಲ. ಕಿತ್ತೂರಲ್ಲಿ ಏರ್ಪಡಿಸಿರುವ ಮೂರು ದಿನಗಳ ನಾಟಕೋತ್ಸವದಲ್ಲಿ ಮೂರು ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ಕಲೆ ಆಸ್ವಾದಿಸಬೇಕು ಎಂದು ಹೇಳಿದರು.
ರಂಗ ನಿರ್ದೇಶಕಿ ವಿಶ್ವೇಶ್ವರಿ ಬಸಲಿಂಗಯ್ಯ ಅವರೂ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ, ಸಂಗೀತ ಕಲಾವಿದ ಈಶ್ವರ ಗಡಿಬಿಡಿ, ಲೆಕ್ಕ ಪರಿಶೋಧಕರಾದ ಬಸವರಾಜ ಚಂದರಗಿ, ಚಂದ್ರಪ್ಪ ಉಪಸ್ಥಿತರಿದ್ದರು.
ಶಿಕ್ಷಕ ಬಸವಪ್ರಭು ಪಾಟೀಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಅನಂತರ ಲಿಂಗದೇವರ ಹಳೆಮನೆ ರಚನೆಯ ‘ಗಡಿಯಂಕ ಕುಡಿಮದ್ದ’ ನಾಟಕ ಪ್ರದರ್ಶನಗೊಂಡಿತು.
‘ಬಸಲಿಂಗಯ್ಯ ಇಲ್ಲದ ಮೊದಲ ವೇದಿಕೆ'
ಚನ್ನಮ್ಮನ ಕಿತ್ತೂರು: ‘ನಮ್ಮಿಬ್ಬರ ಮದುವೆಯಾಗಿ 33 ವರ್ಷ ಕಳೆದಿದ್ದವು. ಅವರ ಜೊತೆಗೆ ಹಂಚಿಕೊಳ್ಳದ, ಅವರಿಲ್ಲದಿರುವ ಮೊದಲ ವೇದಿಕೆಯಿದು..’
ಹೀಗೆ ಮಾತು ಆರಂಭಿಸಿದ ರಂಗ ನಿರ್ದೇಶಕಿ ವಿಶ್ವೇಶ್ವರಿ ಬಸಲಿಂಗಯ್ಯ ಅವರು, ಇತ್ತೀಚೆಗೆ ಕಳೆದುಕೊಂಡಿರುವ ಪತಿಯನ್ನು ಸ್ಮರಿಸಿ ಭಾವುಕರಾದರು. ಅವರ ಮಾತುಗಳನ್ನು ಆಲಿಸಿದ ಸಭಿಕರ ಕಣ್ಣಾಲಿಗಳು ತುಂಬಿಬಂದವು.
1987 ರಲ್ಲಿ ನಿನಾಸಂ ತರಬೇತಿ ಮುಗಿಸಿದ ನಂತರ ಸಾಣೇಹಳ್ಳಿಗೆ ತೆರಳಿದೆವು. ನಾಟಕ, ನೃತ್ಯ ನಿರ್ದೇಶನ ಮಾಡುತ್ತಿದ್ದೆನು. ರಂಗ ನಿರ್ದೇಶಕಿಯಾಗಿ ನನ್ನನ್ನು ಬೆಳೆಸಿದವರು ಕಿತ್ತೂರಿನ ಜನರು. ನಾನು ಬಂದ ನಂತರ ನೂರಾರು ಮಹಿಳೆಯರು ಈ ಕ್ಷೇತ್ರಕ್ಕೆ ಬಂದರು ಎಂದು ಮೆಲುಕು ಹಾಕಿದರು.
Post a Comment