ಇಟಗಿ ಕ್ರಾಸ್ ಹೆಸ್ಕಾಂ ಕಚೇರಿಗೆ ಮುತ್ತಿಗೆ- Kittur


ಇಟಗಿ ಕ್ರಾಸ್ ಹೆಸ್ಕಾಂ ಕಚೇರಿಗೆ ಮುತ್ತಿಗೆ
ಪ್ರೆಸ್‍ಕ್ಲಬ್ ವಾರ್ತೆ
ಕಾದರವಳ್ಳಿ: ರೈತರ ಪಂಪ್‍ಸೆಟ್‍ಗಳಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಇಟಗಿ ಕ್ರಾಸ್ ಬಳಿಯಿರುವ ಹೆಸ್ಕಾಂ 110 ಕೆವಿ. ಕೇಂದ್ರಕ್ಕೆ ಮುತ್ತಿಗೆ ಹಾಕಿ ಅನ್ನದಾತರು ಬುಧವಾರ ಪ್ರತಿಭಟನೆ ನಡೆಸಿದರು.
ಹಗಲು ಹೊತ್ತಿನಲ್ಲಿ ನಾಲ್ಕು ಗಂಟೆ ಹಾಗೂ ರಾತ್ರಿ ಸಮಯದಲ್ಲಿ ಮೂರು ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರಾತ್ರಿ ಸಮಯದಲ್ಲಿ ಕೃಷಿ ಕೂಲಿಕಾರರನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಕಬ್ಬು ನಾಟಿ ಮಾಡಬೇಕಾದ ತಾಪತ್ರಯ ಬಂದಿದೆ ಎಂದು ಅವರು ಅಳಲು ತೋಡಿಕೊಂಡರು.
ಹಗಲು- ರಾತ್ರಿ ಸೇರಿ ಏಳು ಗಂಟೆ ವಿದ್ಯುತ್ ಕೊಡುತ್ತಿದ್ದೀರಿ. ನೀವೂ (ಅಧಿಕಾರಿಗಳು) ಕೂಡಾ ಹೀಗೆ ಭಾಗ ಮಾಡಿಕೊಂಡು ಕೆಲಸ ಮಾಡುತ್ತೀರೇನು ಎಂದು ರೈತರೊಬ್ಬರು ಖಾರವಾಗಿ ಪ್ರಶ್ನಿಸಿದರು.
ದಾಸ್ತಿಕೊಪ್ಪ ಸೇರಿ ಸುತ್ತಲಿನ ಗ್ರಾಮಗಳ ಜಮೀನುಗಳ ಪಂಪ್‍ಸೆಟ್‍ಗಳಿಗೆ ಹಲವಾರು ತಿಂಗಳಿಂದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದಲೂ ನಮ್ಮ ಬೆಳೆಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಎಂ. ಕೆ. ಹಿರೇಮಠ ಅವರು, ಸಮೀಪದ ಮಲಪ್ರಭಾ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ಕೆಲವು ಕಂಬಗಳು ಉರುಳಿ ಬಿದ್ದಿದ್ದವು. ದುರಸ್ತಿ ಕಾರ್ಯದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಈಗ ದುರಸ್ತಿ ಕಾರ್ಯ ಮುಕ್ತಾಯವಾಗಿದೆ. ಇನ್ಮುಂದೆ  ಸರಬರಾಜಿನಲ್ಲಿ ವ್ಯತ್ಯಯವಾಗುವುದಿಲ್ಲ ಎಂದರು.
ಈ ಭಾಗದ ರೈತರ ಸಮಸ್ಯೆಯನ್ನು ಹೆಸ್ಕಾಂ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಮುಕ್ತಾಯಗೊಳಿಸಿದರು. 
ದಾಸ್ತಿಕೊಪ್ಪ, ಎಂ. ಕೆ. ಹುಬ್ಬಳ್ಳಿ, ದೇವರಶೀಗಿಹಳ್ಳಿ, ಕಾದವರಳ್ಳಿ ಮತ್ತು ಹೊಸ ಕಾದರವಳ್ಳಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


 

0/Post a Comment/Comments