ಗರಗ ಸುಕ್ಷೇತ್ರಕ್ಕೆ ಹೊರಟ ಹಿರೇನಂದಿಹಳ್ಳಿ ಹಳಬಂಡಿ - Kittur


 ಹಿರೇನಂದಿಹಳ್ಳಿ ಭಕ್ತರಿಂದ ನೂತನ ಬಂಡಿ

ಪ್ರೆಸ್‍ಕ್ಲಬ್ ವಾರ್ತೆ

ಹಿರೇನಂದಿಹಳ್ಳಿ: ಇಲ್ಲಿಯ ಭಕ್ತ ವಲಯದ ಕೊಡುಗೆಯಿಂದ ನೂತನವಾಗಿ ನಿರ್ಮಿಸಿರುವ ಕಲ್ಲಿನ ಚಕ್ರವುಳ್ಳ ಹಳಬಂಡಿಯು ಪ್ರಖರ ಸನ್ಯಾಸಿ ಮಡಿವಾಳ ಶಿವಯೋಗಿ ದೇಹತ್ಯಾಗ ಮಾಡಿದ ಪವಿತ್ರ ತಾಣ ಗರಗ ಸುಕ್ಷೇತ್ರಕ್ಕೆ ಶುಕ್ರವಾರ ಇಲ್ಲಿಂದ ಯಾತ್ರೆ ಆರಂಭಿಸಿತು.

ರೂ. 5 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹಳಬಂಡಿಗೆ ತೇಗಿನ ಕಟ್ಟಿಗೆ ಬಳಸಲಾಗಿದೆ. ಅಂದವಾಗಿ ಇಲ್ಲಿಯ ಕಲಾವಿದ (ಬಡಿಗೇರ)ರೊಬ್ಬರು ಇದನ್ನು ಸಿದ್ಧಪಡಿಸಿದ್ದಾರೆ.

ನೂತನ ಹಳಬಂಡಿಗೆ ಜನರು ನೀರು ಹಾಕಿ, ಆರತಿ ಬೆಳಗಿ ಭಕ್ತಿಯಿಂದ ಯಾತ್ರೆಯನ್ನು ಬೀಳ್ಕೊಟ್ಟರು. ಹಳಬಂಡಿ ಜೊತೆಗೆ ಹತ್ತಾರು ಎತ್ತಿನ ಬಂಡಿಗಳೂ ಗರಗದ ಕಡೆಗೆ ಪ್ರಯಾಣ ಬೆಳೆಸಿದವು. 

ಫೆ. 19ರಂದು ಮಡಿವಾಳ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದ್ದು, ಅದಕ್ಕೆ ಮುನ್ನಾ ದಿನವಾಗಿ ಈ ಹಳಬಂಡಿ ಯಾತ್ರೆ ಹೊರಡಿಸಲಾಗಿದೆ ಎಂದು ನೇಗಿಲಯೋಗಿ ಸುರಕ್ಷಾ ರೈತ ಸಂಘಟನೆ ಅಧ್ಯಕ್ಷ ಧರ್ಮರಾಜ ಗೌಡರ ತಿಳಿಸಿದರು.

ಹಿರೇನಂದಿಹಳ್ಳಿಯಿಂದ ಹೊರಟ ಯಾತ್ರೆಯು ಜಮಳೂರು, ತುರಕರಶೀಗಿಹಳ್ಳಿ, ಹೊಸೆಟ್ಟಿ, ಧಾರವಾಡ ತಾಲೂಕಿನ ಖಾನಾಪುರ ಮಾರ್ಗವಾಗಿ ಶುಕ್ರವಾರ ಸಂಜೆ ಗರಗ ಕ್ಷೇತ್ರಕ್ಕೆ ಯಾತ್ರೆಯು ತಲುಪಲಿದೆ ಎಂದು ಅವರು ಹೇಳಿದರು.

ಸಂಪ್ರದಾಯದಂತೆ ಈ ಬಂಡಿ ಗರಗಕ್ಕೆ ತಲುಪಿದ ನಂತರ ರಥೋತ್ಸವಕ್ಕೆ ಚಾಲನೆ ದೊರಕಲಿದೆ ಎಂದು ಭಕ್ತರು ತಿಳಿಸಿದರು. ಇವುಗಳ ಜೊತೆಗೆ ಎಂದಿನಂತೆ ನಂದಿಕೋಲು ಹೊತ್ತವರೂ ಈ ಬಂಡಿಯೊಂದಿಗೆ ಸಾಗಿದರು.

ಊರಿನ ಗಣ್ಯರು, ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

0/Post a Comment/Comments