ಸೌಜನ್ಯದ ಕವಿ; ಚನ್ನವೀರ ಕಣವಿ - Kittur


ಸೌಜನ್ಯದ ಸಮನ್ವಯ ಕವಿ; ಚನ್ನವೀರ ಕಣವಿ

ಹಿರಿಯ ಕವಿ ಚನ್ನವೀರ ಕಣವಿ ಅವರು ಫೆ. 16 ರ ಬೆಳಿಗ್ಗೆ 93ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದಾಗಿ 
ಕನ್ನಡಿಗರನ್ನು ಭೌತಿಕವಾಗಿ ಬಿಟ್ಟು ಹೋಗಿದ್ದಾರೆ. ಅವರ ನೆನಪಲ್ಲಿ...

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಅದು, ಕರ್ನಾಟಕ ವಿದ್ಯಾವರ್ಧಕ ಸಂಘದ ಮೊದಲಿನ ಸಭಾಭವನ. ಸ್ನೇಹಿತ, ಕವಿ ಡಿ. ಬಿ. ಡಂಗ ಅವರ ಕವನ ಸಂಕಲನ   ಬಿಡುಗಡೆ ಸಮಾರಂಭ ಅಲ್ಲಿ ನಡೆಯಲಿತ್ತು. ಸಂಕಲನ ಬಿಡುಗಡೆಗೊಳಿಸಲು ಮೆಚ್ಚಿನ ಕವಿ ಚನ್ನವೀರ ಕಣವಿ ಆಗಮಿಸುವವರಿದ್ದರು. ‘ಅದೋ ಬಂದ್ರು ಕಣವಿ ಎಂದ್ರು’, ಬಾಗಿನಲ್ಲಿ ನೋಡಿದರೆ ಕಾರು ಇರಲಿಲ್ಲ.  ಅವರು ಅಂದು ಬಂದದ್ದು, ಸಿಟಿ ಬಸ್ ಏರಿ..

ಸೌಜನ್ಯ, ಸರಳತೆ ಹಿರಿಯ ಕವಿ ಕಣವಿ ಅವರ ಮಾತು ಮತ್ತು ಕೃತಿಯಲ್ಲಿ ಹಾಸುಹೊಕ್ಕಾಗಿತ್ತು. ಸಮನ್ವಯ ಕವಿ ಎಂಬುದು ಅವರ ಬಗೆಗಿದ್ದ ಮೆಚ್ಚಿನ ಮಾತಾಗಿತ್ತು. ಬಿರುದು ಬಾವಲಿಯಂತೆ ಅದನ್ನು ಹೊಗಳಿದ್ದೂ ಉಂಟು. ಕೆಲವರು ಅದನ್ನು ವ್ಯಂಗಾಸ್ತ್ರವನ್ನಾಗಿ ಬಳಸುತ್ತಿದ್ದರೋ ಗೊತ್ತಿಲ್ಲ. 

ಯಾರು ಏನೆನ್ನಲಿ, ಚಂಬೆಳಕಿನ ಕವಿ ನಿಲುವು ಯಾವಾಗಲೂ ತಂಪಾಗಿತ್ತು. ಎಲ್ಲರೂ ಮೆಚ್ಚುವ, ಮೆಚ್ಚಿನ ಕವಿ ಚನ್ನವೀರ ಕಣವಿ ಅವರು ಎಂಬುದರಲ್ಲಿ ಎರಡು ಮಾತಿಲ್ಲ.

ಕಣವಿ ಅವರ ಕಾವ್ಯ ಅರಳಿದ್ದು ನವೊದಯದ ನಡುಹಗಲು ಕಾಲದಲ್ಲಿ. ಕವಿತೆ ಹೊಸೆಯುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲವದು. ಅವರ ಆರಂಭದ ಕವನಗಳ ರಚನೆಯಲ್ಲಿ ಇಂಥ ಪ್ರಭಾವಗಳ   ನೆಲೆಯನ್ನು ಗುರುತಿಸಬಹುದಾಗಿದೆ ಎನ್ನುತ್ತಾರೆ ವಿಮರ್ಶಕರು.

‘ಕಾವ್ಯ ರಚನೆಯ ಪ್ರಾರಂಭದಿಂದಲೂ ನನ್ನ ಮನಸ್ಸನ್ನು ಆಕರ್ಷಿಸಿದ ಕಾವ್ಯ ಪ್ರಕಾರ ಸಾನೆಟ್’ ಎಂದು ಪ್ರೀತಿಯಿಂದ ಒಂದು  ಕಡೆಗೆ  ಅವರೇ ಹೇಳಿಕೊಂಡಿದ್ದಾರೆ. 

ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಂಗ ವಿಭಾಗದ ಮುಖ್ಯಸ್ಥರಾಗಿದ್ದ ಕನ್ನಡಿಗರ ಪ್ರೀತಿಯ ಅಗ್ರಗಣ್ಯ ಕವಿಗೆ ನಾಡೋಜ, ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. 

‘ವಿಶ್ವಭಾರತಿಗೆ ಕನ್ನಡದಾರುತಿ ಬೆಳಗಿದ, ವಿಶ್ವವಿನೂತನ  ವಿದ್ಯಾಚೇತನ ಸರ್ವಹೃದಯಿ ಸಂಸ್ಕಾರಿ'ಯ ಕಡೆಗೆ ‘ನಿತ್ಯ ಮುಂಜಾವಿನ ತುಂತುರು ಹನಿಯಂತೆ' ಕನ್ನಡಿಗರ ಮನಸ್ಸು ಸೆಳೆಯುತ್ತಲೇ ಇರುತ್ತದೆ.

 

0/Post a Comment/Comments