ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಗ್ರಾಮೀಣ ಪ್ರದೇಶದ ಸಾಮಾನ್ಯ ವ್ಯಕ್ತಿಯೊಬ್ಬ ಜಾನಪದ ಲೋಕದ ಶಕ್ತಿಯಾಗಿ ಬೆಳೆದವರು ಬಸಲಿಂಗಯ್ಯ ಹಿರೇಮಠ ಅವರು. ಚಕ್ಕಡಿಯ ಅಚ್ಚಿಗೆ ಎರಡು ಚಕ್ರಗಳಿದ್ದಂತೆ ಬಸಲಿಂಗಯ್ಯ ಮತ್ತು ವಿಶ್ವೇಶ್ವರಿ ದಂಪತಿ ಇದ್ದರು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ನುಡಿದರು.
ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ದಿವಂಗತ ಬಸಲಿಂಗಯ್ಯ ಹಿರೇಮಠ ಹಾಗೂ ನಾಡೋಜ ಡಾ. ಚನ್ನವೀರ ಕಣವಿ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಂಚಿನ ಕಂಠದ ಮೂಲಕ ದೇಶ, ವಿದೇಶದಲ್ಲಿ ಬೈಲೂರು ಗ್ರಾಮ ಪರಿಚಯಿಸಿದ್ದ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ವಿವಾದವಿಲ್ಲದ ಖ್ಯಾತ ಕಲಾವಿದರಾಗಿದ್ದರು ಎಂದು ಶ್ಲಾಘಿಸಿದರು. ವಿಧಾನಸಭೆಯಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಸಲಿಂಗಯ್ಯ ಅವರ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು. ಈ ಮಹಾನ್ ಕಲಾವಿದ ಇನ್ನೂ ಕೆಲ ಕಾಲ ನಮ್ಮೊಡನೆ ಇರಬೇಕಿತ್ತು ಎಂದರು.
ಸಾನಿಧ್ಯ ವಹಿಸಿದ್ದ ಬೈಲೂರು ನಿಷ್ಕಲ ಮಂಟಪ ಮತ್ತು ಮುಂಡರಗಿ ತೋಂಟದಾರ್ಯ ಶಾಖಾ ಮಠದ ಪೀಠಾಧಿಪತಿ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಬಸಲಿಂಗಯ್ಯ-ವಿಶ್ವೇಶ್ವರಿ ದಂಪತಿಯು ಎರಡು ಕಣ್ಣುಗಳಿದ್ದರೂ ನೋಟ ಒಂದೇ ಎನ್ನುವಂತೆ, ಎರಡು ಹೃದಯಗಳಾದರೂ ಭಾಷೆ ಒಂದೇ ಎನ್ನುವಂತೆ ಆದರ್ಶವಾಗಿ ಬದುಕಿದವರು ಎಂದರು.
ಬಸಲಿಂಗಯ್ಯ ಬಿಟ್ಟು ಹೋಗಿರುವ ಜಾನಪದ ಸಂಸ್ಕøತಿಯನ್ನು ಮುಂದಕ್ಕೆ ತೆಗೆದುಕೊಂಡು ವಿಶ್ವೇಶ್ವರಿ ಹೋಗಬೇಕು ಎಂದು ಅವರು ಆಶಿಸಿದರು.
ಬಸವಕಲ್ಯಾಣದ ಗೋಣಿ ರುದ್ರದೇವರು, ಗದಗದ ಶ್ರೀಮಹಾಂತ ದೇವರು, ಮುಮ್ಮಿನಗಟ್ಟಿಯ ಬಸವಾನಂದ ಸ್ವಾಮೀಜಿ, ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ, ಬಾಬಾಸಾಹೇಬ ಪಾಟೀಲ, ವೀರೇಶ ಕಂಬಳಿ, ನಿಜಲಿಂಗಯ್ಯ ಹಿರೇಮಠ, ಜಗದೀಶ ವಸ್ತ್ರದ, ಪ್ರೊ. ಎನ್ .ಎಸ್. ಗಲಗಲಿ, ಶಂಕರ ಹೊಳಿ, ದೇವೆಂದ್ರ ಪಾಟೀಲ, ಶಿವನಗೌಡ ಪಾಟೀಲ, ಇದ್ದರು.
ಚಂದ್ರಶೇಖರ ಓಶಿಮಠ ಅವರಿಂದ ವಚನಗಾಯನ ನಡೆಯಿತು. ಧಾರವಾಡದ ರತಿಕಾ ನೃತ್ಯ ನಿಕೇತನ ಇವರಿಂದ ನೃತ್ಯ ನಮನ ಜರುಗಿತು. ಶಿವಮೂರ್ತಿ ಕುರಗುಂದ, ಬಸವರಾಜ ಕುಪ್ಪಸಗೌಡರ ಕಾರ್ಯಕ್ರಮ ನಿರೂಪಿಸಿದರು.
ನಾಡೋಜ ಡಾ. ಚನ್ನವೀರ ಕಣವಿ ಮತ್ತು ಬಸಲಿಂಗಯ್ಯ ಅವರಿಗೆ ಕಾರ್ಯಕ್ರಮದಲ್ಲಿ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
Post a Comment