‘ಸಮಸ್ಯೆಗೆ ಪರಿಹಾರ ದೊರೆತರೆ ಕಾರ್ಯಕ್ರಮ ಯಶಸ್ವಿ’ : ಶಾಸಕ ದೊಡ್ಡಗೌಡರ

‘ಸಮಸ್ಯೆಗೆ ಪರಿಹಾರ ದೊರೆತರೆ ಕಾರ್ಯಕ್ರಮ ಯಶಸ್ವಿ’

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ದೊರೆತರೆ ಮಾತ್ರ ಅಧಿಕಾರಿ ನಡೆ; ಹಳ್ಳಿ ಕಡೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ   ಶನಿವಾರ ಹಮ್ಮಿಕೊಂಡಿದ್ದ ತಹಶೀಲ್ದಾರ್ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಹಶೀಲ್ದಾರ್,  ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗ ಸೇರಿ ಎಲ್ಲ ಅಧಿಕಾರಿ, ನೌಕರರು ಗ್ರಾಮಾಂತರ ಪ್ರದೇಶದ ಜನತೆಯ ಬೇಡಿಕೆ,  ನೋವು ಮತ್ತು ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಜನಪ್ರತಿನಿಧಿ ಅಥವಾ ಅಧಿಕಾರಿ ಮುಂದೆ ಹಾಕಲಾಗಿರುವ ಟೇಬಲ್ ಮೇಲೆ ಯಾವುದೇ ಫೈಲುಗಳಿಲ್ಲದೆ ಸ್ವಚ್ಛವಾಗಿದ್ದರೆ   ಎರಡು ಅರ್ಥಗಳನ್ನು ಅದು ಕೊಡುತ್ತದೆ. ಒಂದು ಎಲ್ಲ ಕಡತಗಳನ್ನು ವಿಲೆ ಮಾಡಿದ್ದಾರೆಂದು. ಮತ್ತೊಂದು ಯಾವುದೇ ಕಡತವನ್ನು ಅಧಿಕಾರಿ ತರಿಸಿಕೊಂಡಿಲ್ಲವೆಂದು. ಎಲ್ಲ ಕಡತ ವಿಲೆ ಮಾಡಿ ಟೇಬಲ್ ಕಾಲಿ ಇಟ್ಟರೆ ಅದಕ್ಕೆ ಹೆಚ್ಚು ಅರ್ಥ ಬರುತ್ತದೆ ಎಂದು ಮಾರ್ಮಿಕವಾಗಿ ಅವರು ನುಡಿದರು.

ಫಲಾನುಭವಿಗಳಿಗೆ ಮಾಸಾಶನದ ಆದೇಶ ಪತ್ರ, ರೈತರಿಗೆ ಪಿವಿಸಿ ಪೈಪ್,  ರೂಟರ್ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾಂವಿ, ತಾಲೂಕು ವೈದ್ಯಾಧಿಕಾರಿ  ಎಸ್ ಎಸ್ ಸಿದ್ದಣ್ಣವರ, ಸಿಪಿಐ ಮಹಾಂತೇಶ ಹೊಸಪೇಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಟಿ ಬಳೆಗಾರ, ಎಇಇ ಪ್ರವೀಣ ಹುಲಜಿ ಕಂದಾಯ ನಿರೀಕ್ಷಕ ವಿ. ಬಿ. ಬಡಗಾವಿ,  ಗ್ರಾಮ ಲೆಕ್ಕಿಗ ಮಕಾಂದಾರ್, ಮುಖಂಡರಾದ ಉಳವಪ್ಪ ಉಳ್ಳಾಗಡ್ಡಿ, ಅಜ್ಜಪ್ಪ ನೇಗಿನಹಾಳ, ಶ್ಯಾಮ್ ಶಿಲೇದಾರ, ಕಿರಣ ಪಾಟೀಲ ಈರಣ್ಣ ಬಡಿಗೇರ, ಗ್ರಾಮದ   ನಾಗರಿಕರು ಉಪಸ್ಥಿತರಿದ್ದರು.