ಕಿತ್ತೂರು ಸೀಮೆಯ ಎತ್ತರದ ಕಲಾವಿದ ಬಸಲಿಂಗಯ್ಯ ಹಿರೇಮಠ ಇನ್ನಿಲ್ಲ - Kittur


 ಕಿತ್ತೂರು ಸೀಮೆಯ ಎತ್ತರದ ಕಲಾವಿದ ಬಸಲಿಂಗಯ್ಯ ಇನ್ನಿಲ್ಲ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಖ್ಯಾತ ಜನಪದ ವಿದ್ವಾಂಸ, ಗ್ರಾಮೀಣ ಭಾಗದ ಸಣ್ಣಾಟ, ಶ್ರೀಕೃಷ್ಣ ಪಾರಿಜಾತ ನಾಟಕಗಳ ಪರಿಮಳವನ್ನು ಅಂತರಾಷ್ಟ್ರೀಯ ವೇದಿಕೆ ಮೇಲೆ ಪಸರಿಸಿದ್ದ ಕಿತ್ತೂರು ನೆಲದ ಕಂಚಿನ ಕಂಠದ ಗಾಯಕ ಬಸಲಿಂಗಯ್ಯ ಹಿರೇಮಠ (62) ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಭಾನುವಾರ(ಜ. 9) ರಂದು ನಿಧನರಾಗಿದ್ದಾರೆ. 

ಅವರೆಲ್ಲ ಕಾರ್ಯಕ್ರಮಗಳಿಗೆ ನೆರಳಾಗಿ, ನಿರೂಪಕಿಯಾಗಿ, ಸಹಗಾಯಕಿ ಆಗಿದ್ದ ಪತ್ನಿ ವಿಶ್ವೇಶ್ವರಿ, ಪುತ್ರ ನಾಗಭೂಷಣ ಹಾಗೂ ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಸೋಮವಾರ (ಜ. 10) ಸ್ವಗ್ರಾಮ ಬೈಲೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಪ್ಪಟ ಗ್ರಾಮೀಣ ಪ್ರತಿಭೆ

ಸ್ವಂತ ಊರಿನ ಗುಡಿ ಪ್ರಾಂಗಣದಲ್ಲಿ ಕುಳಿತು ಸಂಜೆ ಹೊತ್ತು ಭಜನೆ ಪದಗಳನ್ನು ಹಾಡುತ್ತಿದ್ದ ನೆಲದ ಸಾಮಾನ್ಯ ಕಲಾವಿದನೊಬ್ಬ ಅಂತರಾಷ್ಟ್ರೀಯ   ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ, ಅದೇ ಕ್ಷೇತ್ರದ ವಿದ್ವಾಂಸರಾಗಿ ಜನಮಾನಸದ ಆಳಕ್ಕಿಳಿದಿದ್ದು ನೆಲದ ಅಚ್ಚರಿಗಳಲ್ಲೊಂದು. ಅದು ಅಸಾಮಾನ್ಯ ಸಂಗತಿಯಾಗಿ, ಹಲವು ಗ್ರಾಮೀಣ ಪ್ರತಿಭೆಗಳಿಗೆ ಸ್ಫೂರ್ತಿಯಾಗಿ ಕಾಣುತ್ತದೆ.

ಬಸಲಿಂಗಯ್ಯ ಅವರೊಳಗಿನ ಪ್ರತಿಭೆ ಮೊದಲು ಗುರುತಿಸಿದ್ದು ರಂಗ ನಿರ್ದೇಶಕ ಜಯತೀರ್ಥ ಜೋಶಿ ಅವರು. ಶಿಬಿರ ಹಮ್ಮಿಕೊಂಡು ಇಲ್ಲಿಯ  ಹವ್ಯಾಸಿ ಕಲಾವಿದರನ್ನು   ಸೇರಿಸಿಕೊಂಡು ‘ಧರ್ಮಪುರಿಯ ಶ್ವೇತ ವೃತ್ತ' ನಾಟಕ ಪ್ರದರ್ಶಿಸಿದ್ದರು. ಈ ನಾಟಕದುದ್ದಕ್ಕೂ ಬಸಲಿಂಗಯ್ಯ ಅವರ ಹಾಡೇ ನಾಟಕದ ಜೀವಾಳವಾಗಿತ್ತು. ಅವರ ಕಂಚಿನ ಕಂಠದ ಪರಿಚಯ ನಾಡಿನ ಕಲಾಸಕ್ತರಿಗಾಗಿದ್ದು ಅದೇ ಅವಧಿಯಲ್ಲಿ ಎನ್ನಬೇಕು. ಆಗವರು ಕಿತ್ತೂರು ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. 

ಈ ನಾಟಕ ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ಅಂದು ಪ್ರದರ್ಶನಗೊಂಡಿತು. ಅವರ ಅದ್ಭುತ ಗಾಯನ ಇಡೀ ನಾಡಿಗೆ ಪರಿಚಯವಾಯಿತು. ನೀನಾಸಂನಲ್ಲೂ ತರಬೇತಿ ಪಡೆದು ಪಕ್ವಗೊಂಡರು. ಅನಂತರ ಜನಪದ ಕ್ಷೇತ್ರದಲ್ಲಿ ಹಿಂತಿರುಗಿ ನೋಡಿದ್ದಿಲ್ಲ. ಇದೇ ಮಣ್ಣಿನಲ್ಲಿ ಸಣ್ಣಾಟ, ಜನಪದ ಗಾಯನ, ಸೋಗುಗಳ ಉತ್ಸವಗಳನ್ನು ನಡೆಸಿ ಪ್ರಸಿದ್ಧ ಜನಪದ ವಿದ್ವಾಂಸರನ್ನು ಹಾಗೂ ಪ್ರಸಿದ್ಧ ಜನಪದ ಕಲಾವಿದರನ್ನು ಕ್ರಾಂತಿನಾಡಿಗೆ ಕರೆತಂದು ಗಮನ ಸೆಳೆದರು. ಅವರೇ ಸ್ಥಾಪಿಸಿದ್ದ  ಜನಪದ ಸಂಶೋಧನೆ ಕೇಂದ್ರದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಈ ಕಚೇರಿ ಧಾರವಾಡಕ್ಕೆ ಸ್ಥಳಾಂತರವಾಯಿತು. ಹಳ್ಳಿಯಿಂದ ನಗರ ಪ್ರದೇಶಕ್ಕೆ ‘ಜನಪದ’ ಪಲಾಯನ ಮಾಡಿದ ನಂತರ ಅವರ ಜನಪ್ರಿಯತೆ, ಅವರ ಕಂಚಿನ ಕಂಠದ ವಿಸ್ತಾರ ವ್ಯಾಪಕವಾಯಿತು. ಸೀಮೋಲ್ಲಂಘನವನ್ನೂ  ಮಾಡಿತು. ಅಂತರಾಷ್ಟ್ರೀಯ ಮಟ್ಟದಲ್ಲೂ ಅವರ ಕಲಾಪ್ರತಿಭೆ ಅನಾವರಣಗೊಂಡಿತು.

ಎತ್ತರದ ಸ್ವರ ಶ್ರೀಮಂತಿಕೆ ಅವರ ಹೆಗ್ಗಳಿಕೆಯಾಗಿತ್ತು. ‘ಬಿತ್ತರದಲಿ ಭೋರೆನುತಿದೆ ಕಿತ್ತೂರಿನ ಹೊಳೆಹುಚ್ಚು, ಕಿತ್ತೂರಿನ ಕಣ, ಕಣದಲ್ಲಿ ಕಾಣುತಲಿದೆ ಕೆಚ್ಚು' ಮತ್ತು ‘ಹುಲಿಯು ಹುಟ್ಟಿತ್ತೋ ಕಿತ್ತೂರು ನಾಡಾಗsss.. ಎಂಬ ಜನಪದ ಹಾಡುಗಳನ್ನು ಅವರ ಸಿರಿಕಂಠದಲ್ಲೇ ಕೇಳಬೇಕಿತ್ತು. ಶರೀಫರ ತತ್ವಪದಗಳು, ಸುಗ್ಗಿ ಹಾಡುಗಳನ್ನು ಎತ್ತರದ ಸ್ವರದಲ್ಲಿ ಹಾಡುತ್ತಿದ್ದರೆ ಶೋತೃಗಳ ಅಂತರಾಳಕ್ಕಿಳಿದು ಗುಂಗು ಹಿಡಿಸುತ್ತಿದ್ದವು. 

ಸಂಜೆ ಕುಳಿತರೆ ಬೆಳಗಿನ ಜಾವದವರೆಗೂ ಕುಳಿತು ನೋಡಬೇಕಿದ್ದ ಶ್ರೀಕೃಷ್ಣ ಪಾರಿಜಾತ ನಾಟಕ ಪರಿಷ್ಕರಿಸಿ ಅದನ್ನು ಸುಮಾರು ಎರಡೂವರೆ ಗಂಟೆಗೆ ಇಳಿಸಿ ನಗರ ಪ್ರದೇಶದ ಜನಕ್ಕೂ ಪರಿಚಯಿಸಿದ್ದರು. ಹಾಡು, ನಾಟಕ ಪ್ರದರ್ಶನ, ರಂಗ ನಿರ್ದೇಶನ, ಸಂಶೋಧನೆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗ್ರಾಮೀಣ ಪ್ರತಿಭೆ ನಮ್ಮಿಂದ ಭೌತಿಕವಾಗಿ ಬೇಗ ದೂರ ಹೋದಂತಾಗಿದೆ. ವಿಷಾದ ಮುಸುಕು ಹಾಕಿದಂತಾಗಿದೆ.

ಬಸಲಿಂಗಯ್ಯ ಹಿರೇಮಠ ನಾಡು ಕಂಡ ಅಪರೂಪದ ಜನಪದ ವಿದ್ವಾಂಸ. ಅವರು ಕಿತ್ತೂರು ನಾಡಿನ ಪ್ರತಿಭೆ. ಅಂಥವರನ್ನು ನಾಡು ಕಳೆದುಕೊಂಡಿದೆ. ಕಿತ್ತೂರು ಕರ್ನಾಟಕದ ಹಿರಿಮೆ ಅವರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರುವೆ

  ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠ, ಚನ್ನಮ್ಮನ ಕಿತ್ತೂರು