ಬೇಕರಿ, ದಾಬಾಗೆ ಇಲ್ಲ ನಿಯಂತ್ರಣ
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕೋವಿಡ್ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಘೋಷಣೆ ಮಾಡಿರುವ ವಾರಾಂತ್ಯ ಕರ್ಫ್ಯೂಗೆ ಪಟ್ಟಣದಲ್ಲಿ ಪೂರ್ಣ ಬೆಂಬಲ ದೊರೆತಿಲ್ಲ. ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ನಿಯಮಾವಳಿ ಜಾರಿಯಲ್ಲಿರುತ್ತವೆ ಎಂದು ಧ್ವನಿವರ್ಧಕ ಮೂಲಕ ಸಾರಲಾಗಿದ್ದರೂ ದಾಬಾಗಳು ನಿತ್ಯದಂತೆ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂತು.
ಶನಿವಾರ ಬೆಳಿಗ್ಗೆಯಾದರೂ ಕಠಿಣ ಪಾಲನೆ ಮಾಡಲಾಗುತ್ತದೆ ಎಂದು ಇಟ್ಟಿದ್ದ ಸಾರ್ವಜನಿಕರ ನಿರೀಕ್ಷೆಯೂ ಹುಸಿಯಾಗಿತ್ತು. ಹಾರ್ಡವೇರ್ ಅಂಗಡಿ, ಬೇಕರಿಗಳು ಶೆಟರ್ಸ್ ಮೇಲಕ್ಕೆತ್ತಿ ವ್ಯಾಪಾರ ನಡೆಸಿದ್ದು ಕಣ್ಣಿಗೆ ಬಿತ್ತು.
ಇಂಥ ಕೆಲವು ಅಂಗಡಿಗಳು ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿದ್ದರೂ ಅವುಗಳಿಗೂ ಯಾರೂ ತಾಕೀತು ಮಾಡಿದಂತೆ ತೋರಲಿಲ್ಲ. ಕೆಲ ಪಾನ್ಶಾಪ್ ಕೂಡಾ ತೆರೆದಿದ್ದು ‘ರಿಯಾಲಿಟಿ ಚೆಕ್'ನಲ್ಲಿ ಕಂಡುಬಂದವು.
ರಾತ್ರಿ ಕರ್ಫ್ಯೂ ಕಠಿಣವಾಗಿ ಪಾಲನೆಯಾಗದಿರುವ ಮೌಖಿಕ ದೂರುಗಳನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಒಂದೆಡೆ ಕಠಿಣ ನಿಯಮ, ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿಟ್ಟಿದ್ದರೂ ಕೆಲ ಅಂಗಡಿಕಾರರೂ ಸ್ಪಂದಿಸುತ್ತಿಲ್ಲ. ಸರ್ಕಾರದ ನಿಯಮ ಜಾರಿಗೆ ತರಲು ಅಧಿಕಾರಿಗಳು ಸಮರ್ಪಕವಾಗಿ ಶ್ರಮಿಸುತ್ತಿಲ್ಲದೆ ಇರುವುದರಿಂದ ಹೀಗಾಗುತ್ತಿರಬಹುದು ಎಂಬ ಕೊರಗು ಪ್ರಜ್ಞಾವಂತ ನಾಗರಿಕದ್ದಾಗಿದೆ.
ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಸಭೆ ನಡೆಸಿ ಕರ್ಫ್ಯೂ ನಿಯಮಾವಳಿ ಕಠಿಣ ಜಾರಿಗೆ ಪಿಡಿಓಗಳಿಗೆ ಸೂಚಿಸಲಾಗಿದ್ದರೂ, ಬಹುತೇಕ ಗ್ರಾಮಗಳಲ್ಲಿ ಕಿತ್ತೂರಿನ ಪರಿಸ್ಥಿತಿಯಂತೆ ಇದೆ ಎಂಬ ವರದಿಗಳು ಬಂದಿವೆ.
ಪರಿಸ್ಥಿತಿ ನಿಯಂತ್ರಣ ತಪ್ಪುವ ಮೊದಲೇ ಸರ್ಕಾರದ ಆದೇಶದ ಪಾಲನೆಯಾಗುವಂತೆ ಹಿರಿಯ ಅಧಿಕಾರಿಗಳು ನೋಡಿಕೊಳ್ಳಬೇಕಿದೆ ಎನ್ನುತ್ತಾರೆ ನಾಗರಿಕರು.